ರಾಯಚೂರು ಏಪ್ರಿಲ್ 09 (ಕರ್ನಾಟಕ ವಾರ್ತೆ): ಪ್ರಸ್ತುತ ಜಿಲ್ಲೆಯಲ್ಲಿ ಬೇಸಿಗೆ ಕಾಲ ಆರಂಭವಾಗಿದೆ. ಈ ಅವಧಿಯಲ್ಲಿ ಅತಿಯಾದ ಉಷ್ಣಾಂಶದಿಂದ ನಾನಾ ರೀತಿಯ ಅನಾರೋಗ್ಯ ಪರಿಸ್ಥಿತಿಗಳು ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ಸಲಹೆಗಳನ್ನು ನೀಡಲಾಗುತ್ತಿದ್ದು, ಅವುಗಳನ್ನು ಸರಿಯಾಗಿ ಪಾಲಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಕೋರಿದ್ದಾರೆ.
ಪ್ರಸ್ತುತ ವರ್ಷದ ಬೇಸಿಗೆಯು ಪ್ರಖರವಾಗಿರುವ ಸಾಧ್ಯತೆಗಳ ಬಗ್ಗೆ ವರದಿ ಹಿನ್ನಲೆಯಲ್ಲಿ ಮುಖ್ಯವಾಗಿ ಚಿಕ್ಕ ಮಕ್ಕಳು, ಗರ್ಭಿಣಿ, ಬಾಣಂತಿಯರು, ವಯೊವೃದ್ದರ ಕಾಳಜಿಗಾಗಿ ಕುಟುಂಬದ ಸದಸ್ಯರು ಹೆಚ್ಚಿನ ಆಧ್ಯತೆ ನೀಡಬೇಕು. ಬಿಸಿಲಿನ ಪ್ರಖರತೆ ಹೆಚ್ಚಿರುವ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹೆಚ್ಚು ಜಾಗರೂಕರಾಗಿರಬೇಕು.
ಹೆರಿಗೆ ನಂತರ ಬಾಣಂತಿಯರು ನವಜಾತ ಶಿಶುವಿಗೆ ಮೇಲಿಂದ ಮೇಲೆ ಎದೆ ಹಾಲುಣಿಸುವ ಮೂಲಕ ಶಿಶುವಿನಲ್ಲಾಗುವ ನಿರ್ಜಲೀಕರಣ ತಡೆಯಲು ಸಹಕಾರಿಯಾಗುವುದು. ರೋಗ ನಿರೋಧಕ ಶಕ್ತಿ ವೃದ್ದಿಸಲು 12 ಮಾರಕ ರೋಗಗಳ ವಿರುದ್ಧ ಲಸಿಕೆ ಹಾಕಿಸಲು ಮರೆಯಬಾರದು.
ಪ್ರಖರ ಬಿಸಿಲಿನ ಅವಧಿಯಲ್ಲಿ ಆದಷ್ಟು ಮನೆಯ ಹೊರಗೆ ಹೋಗದಂತೆ ಮುತವರ್ಜಿ ವಹಿಸಿ. ಮನೆಯ ಒಳಗೆ ಅಥವಾ ನೆರಳು ಇರುವ ಸ್ಥಳದಲ್ಲಿ ವಿಶ್ರಾಂತಿ ಪಡೆಯಬೇಕಿದೆ. ಆದಷ್ಟು ಮಸಾಲೆಯುಕ್ತ ಪದಾರ್ಥಗಳ ಸೇವನೆ ಕಡಿಮೆ ಮಾಡಬೇಕು. ಅಧಿಕ ಬಿಸಿಲಿರುವ ಸಮಯದಲ್ಲಿ ಮನೆಯ ಹೊರಗೆ ಹೊಗದಿರಲು ಯೋಚಿಸಿ, ದೈನಂದಿನವಾಗಿ ತೆಗೆದುಕೊಳ್ಳುವ ಮಾತ್ರೆಗಳನ್ನು ಜೊತೆಯಲ್ಲಿರಿಸಿಕೊಳ್ಳಿ, ದ್ರವ ಆಹಾರ ಹೆಚ್ಚು ಸೇವಿಸಬೇಕು.
ಆಟವಾಡುವ ಮಕ್ಕಳು ಬಿಸಿಲಿನಲ್ಲಿ ನಿಲ್ಲಿಸಿರುವ ವಾಹನ ಮುಟ್ಟದಂತೆ ಜಾಗೃತಿ ವಹಿಸಬೇಕು. ಮಕ್ಕಳು ಅಸುರಕ್ಷಿತ ಆಹಾರ, ಪಾನೀಯ ಸೇವಿಸದಂತೆ ನಿಗಾವಹಿಸಿ.
ಓಆರ್‌ಎಸ್ ಬಳಕೆಗೆ ಆಧ್ಯತೆ ನೀಡಿ: ನಿರ್ಜಲಿಕರಿಣದಿಂದ ದೇಹದ ನೀರಿನ ಅಂಶದ ಜೊತೆಗೆ ಲವಣಾಂಶ ಕಡಿಮೆಯಾಗದಂತೆ ಓಆರ್‌ಎಸ್ ಜೀವಜಲ ಪ್ಯಾಕೇಟ್ ಸದಾ ಮನೆಯಲ್ಲಿರಲಿ. ಒಂದು ಲೀಟರ್ ನೀರಿಗೆ ಪ್ಯಾಕೇಟ್ ಸಂಪೂರ್ಣ ಪುಡಿ ಹಾಕಿ ದ್ರಾವಣ ಸಿದ್ದಪಡಿಸಿ 24 ಗಂಟೆಯೊಳಗೆ ಬಳಸಬೇಕು. ಇದಲ್ಲದೆ ಲಿಂಬೂ ಪಾನಕ, ಎಳೆನೀರು, ಮಜ್ಜಿಗೆ ಕುಡಿಯಬಹುದು. ಆಹಾರದಲ್ಲಿ ಬೇಳೆ ತಿಳಿ ಬಳಸಿ, ಅಲ್ಲದೆ ಮುಂಜಾಗೃತವಾಗಿ ಜಿಲ್ಲಾ ಎನ್‌ಪೋರ್ಸಮೆಂಟ್ ಅಧಿಕಾರಿ ಡಾ.ಶಿವಕುಮಾರ ನಾರಾ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಜಿಲ್ಲಾ ವಿಪತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಯನ್ವಯ ಆರೋಗ್ಯ ಇಲಾಖೆ ಸಿಬ್ಬಂದಿ ಎಲ್ಲ ಆಸ್ಪತ್ರೆಯ ಬರುವ ಜನತೆಗೆ ಗ್ರಾಮಗಳಲ್ಲಿ ಹತ್ತಿ ಉಡುಪು ಬಳಕೆ, ಛತ್ರಿ ಜೊತೆಯಲ್ಲಿ ನೀರು ಇರುವಂತೆ ಸಾರ್ವಜನಿಕರಿಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ.
ವಾಂತಿ ಬೇಧಿ ತಡೆ: ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ದೀಕರಿಸಿದ ನೀರು ಅಥವಾ ನೀರು ಶುದ್ದೀಕರಣ ಘಟಕದ ನೀರನ್ನು ಕುಡಿಯಲು ಬಳಸಬೇಕು. ಅಲ್ಲದೆ ಊಟದ ಮೊದಲು ಶೌಚದ ನಂತರ ಕೈಗಳನ್ನು ಸಾಬೂನು ಮತ್ತು ನೀರಿನಿಂದ 45 ಸೆಕೆಂಡ್‌ಗಳ ಕಾಲ ತೊಳೆದ ನಂತರ ಆಹಾರ ಸೇವಿಸಬೇಕು. ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಬೇಕು. ಸುರಕ್ಷಿತ ಆಹಾರ ಮಾತ್ರ ಸೇವಿಸಿ, ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಬೇಕು.
ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಸೇವಿಸಬಾರದು, ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಬೇಕು. ಇದಕ್ಕಾಗಿ ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಗಣೇಶ್ ಕೆ. ನೇತೃತ್ವದಲ್ಲಿ ಅಗತ್ಯ ಜಾಗೃತಿ ನೀಡಲಾಗುತ್ತಿದೆ. ಅಲ್ಲದೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಮುಂಜಾಗ್ರತಾ ಔಷಧಿಗಳು ಲಭ್ಯವಿವೆ. ಯಾವುದೇ ತುರ್ತು ಸಂದರ್ಭದಲ್ಲಿ 108ಕ್ಕೆ ಕರೆ ಮಾಡಿ ಆಂಬ್ಯುಲೆನ್ಸ್ ಸದುಪಯೋಗ ಪಡೆಯಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

