“ದೇಶದ ಬೆನ್ನೆಲುಬಾದ ರೈತರು ಹಾಗೂ ಶೋಷಿತ ವರ್ಗದವರಾದ ದಲಿತರ ಬದುಕಿನಲ್ಲಿ ಬೆಳಕು ತರಲು ಬಾಬು ಜಗಜೀವನರಾಂ ಅವರು ಪಟ್ಟ ಶ್ರಮ ಅಮೋಘವಾದುದು. ಅವರ ಜೀವನ ಮತ್ತು ಹೋರಾಟದ ಹಾದಿ ಇಂದಿನ ಯುವ ಪೀಳಿಗೆಗೆ ಅತ್ಯಂತ ದೊಡ್ಡ ಮಾದರಿ,” ಎಂದು ಕೊಪ್ಪಳ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ಎಸ್.ವಿ.ಡಾಣಿ ಅವರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ತಳಕಲ್ ಗ್ರಾಮದ ಬಳಿ ಇರುವ ಕೊಪ್ಪಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಬಾಬು ಜಗಜೀವನರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಬಾಬು ಜಗಜೀವನರಾಂ ಅವರ ಸಾಧನೆಗಳನ್ನು ವಿದ್ಯಾರ್ಥಿಗಳು ಕೇವಲ ಓದುವುದಕ್ಕೆ ಸೀಮಿತಗೊಳಿಸದೆ, ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ದೇಶವನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸದೃಢಗೊಳಿಸುವ ಗುರಿ ಹೊಂದಬೇಕು ಎಂದು ಕುಲಪತಿಗಳು ಕರೆ ನೀಡಿದರು.
ಬಾಬೂಜಿಯವರು ಜಾತಿ ತಾರತಮ್ಯದ ವಿರುದ್ಧ ಹೋರಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಮಾನ ಗೌರವ ಸಿಗುವಂತೆ ಮಾಡಿದ ಕ್ರಾಂತಿಕಾರಿ ನಾಯಕ ಎಂದು ಸ್ಮರಿಸಿದರು.ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಕೆ.ರಮೇಶ, ಆಡಳಿತಾಧಿಕಾರಿ ತಿಮ್ಮಾರಡ್ಡಿ ಮೇಟಿ, ವೀರೇಶ ಉತ್ತಂಗಿ, ಅನಂತಕುಮಾರ ದೊರೆ, ಮಂಜುನಾಥ, ರಂಗನಾಥ ಕೋಳೂರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *