ಸಿಂಧನೂರು: ಸನ್ ರೈಸ್ ಡಿ ಫಾರ್ಮಸಿ, ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜು ವತಿಯಿಂದ ಪ್ರತೀ ಶನಿವಾರದಂತೆ ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ ಏಪ್ರಿಲ್ 4 ರ ಶನಿವಾರದಂದು ಆಯೋಜಿಸಲಾಯಿತು.ಈ ಕಾರ್ಯಕ್ರಮಕ್ಕೆ ಬಸವ ಮಕ್ಕಳ ಆಸ್ಪತ್ರೆ, ಸಿಂಧನೂರಿನ ಖ್ಯಾತ ಮಕ್ಕಳ ತಜ್ಞರಾದ ಡಾ. ದೊಡ್ಡ ಬಸವ (MBBS, MD Pediatrics) ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಮಾನಸಿಕ ಆರೋಗ್ಯ ಸಮಾಲೋಚನೆ ಹಾಗೂ ಪ್ರೇರಣಾತ್ಮಕ ಉಪನ್ಯಾಸ ನೀಡಿದರು.ತಮ್ಮ ಉಪನ್ಯಾಸದಲ್ಲಿ ಅವರು “ಮಾನಸಿಕ ಆರೋಗ್ಯವು ಪ್ರತಿಯೊಬ್ಬರ ಜೀವನದ ಪ್ರಮುಖ ಅಂಶವಾಗಿದ್ದು, ಒಬ್ಬ ಆರೋಗ್ಯ ವೃತ್ತಿಪರನಿಗೆ ಆತ್ಮವಿಶ್ವಾಸ, ಸಹಾನುಭೂತಿ ಮತ್ತು ಸೇವಾಭಾವನೆ ಅತ್ಯಂತ ಅಗತ್ಯ. ನೀವು ಕಲಿಯುತ್ತಿರುವ ವಿದ್ಯೆ ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ, ಸಮಾಜ ಸೇವೆಗಾಗಿ ಎಂಬ ಮನೋಭಾವದಿಂದ ಮುಂದೆ ಸಾಗಬೇಕು” ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳಿಗೆ “ನೀವು ಮುಂದಿನ ದಿನಗಳಲ್ಲಿ ಡಿ ಫಾರ್ಮಸಿ ಆಫೀಸರ್, ನರ್ಸಿಂಗ್ ಆಫೀಸರ್ ಹಾಗೂ ಪ್ಯಾರಾ ಮೆಡಿಕಲ್ ಆಫೀಸರ್‌ಗಳಾಗಿ ಸಮಾಜದಲ್ಲಿ ಗೌರವವನ್ನು ಪಡೆಯುವವರು. ಆದ್ದರಿಂದ ನೀವು ನಿಮ್ಮ ವೃತ್ತಿಯಲ್ಲಿ ನಿಷ್ಠೆ, ಶಿಸ್ತು ಮತ್ತು ಮಾನವೀಯತೆಯನ್ನು ಅಳವಡಿಸಿಕೊಳ್ಳಬೇಕು.ರೋಗಿಗಳಿಗೆ ಕೇವಲ ಚಿಕಿತ್ಸೆ ನೀಡುವುದಷ್ಟೇ ಅಲ್ಲ, ಅವರಿಗೆ ಧೈರ್ಯ, ಆಶೆ ಮತ್ತು ಆರೈಕೆ ನೀಡುವ ಜವಾಬ್ದಾರಿ ನಿಮ್ಮದು” ಎಂದು ಮಾರ್ಗದರ್ಶನ ನೀಡಿದರು.
ಹಾಗೂ “ಒಬ್ಬ ಉತ್ತಮ ನರ್ಸ್ ಅಥವಾ ವೈದ್ಯಕೀಯ ಸಿಬ್ಬಂದಿ ರೋಗಿಗಳ ಜೀವನದಲ್ಲಿ ಬದಲಾವಣೆ ತರಬಲ್ಲ ಶಕ್ತಿ ಹೊಂದಿರುತ್ತಾರೆ. ನಿಮ್ಮ ಕೆಲಸದ ಮೂಲಕ ಸಮಾಜದಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಬೆಳೆಸಬೇಕು” ಎಂದು ಹೇಳಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಸನ್ ರೈಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಇರ್ಷಾದ್ ಕೆ ಅವರು, ಸಂಸ್ಥೆಯ ಅಧ್ಯಕ್ಷರ ಪರವಾಗಿ, ಎಲ್ಲಾ ಉಪನ್ಯಾಸಕರ ಪರವಾಗಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಡಾ. ದೊಡ್ಡ ಬಸವ ಸರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಸಲ್ಲಿಸಿದರು.ಅವರ ಸೇವಾಭಾವನೆ, ಸಿಂಧನೂರಿನ ಮಕ್ಕಳ ವೈದ್ಯಕೀಯ ಕ್ಷೇತ್ರದಲ್ಲಿನ ಅನುಭವ ಹಾಗೂ ಬಡವರ ಕಾಳಜಿ ಮತ್ತು ಬಿಡುವಿಲ್ಲದ ಸಮಯದಲ್ಲೂ ನಮ್ಮ ಸನ್ ರೈಸ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಹೊಂದಿರುವ ಕಾಳಜಿಯನ್ನು ಪ್ರಶಂಸಿಸಿ, ಇಂತಹ ಉಪನ್ಯಾಸಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅತ್ಯಂತ ಸಹಾಯಕವಾಗುತ್ತವೆ ಎಂದು ಹೇಳಿದರು.ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಜೊತೆಗೆ ಅವರ ವೃತ್ತಿ ಜೀವನದ ಬಗ್ಗೆ ಸ್ಪಷ್ಟತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಿದ ಮಹತ್ವದ ಕಾರ್ಯಕ್ರಮವಾಗಿ ನೆರವೇರಿತು. ಈ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಇರ್ಷಾದ್ ಕೆ ಹಾಗೂ ಆಸಿಫ್ ಉಪನ್ಯಾಸಕರಾದ ರಾಜೇಶ್, ಅಶು ಪಾಷಾ,ಸಂತೋಷಿ,ವೀರೇಶ್, ಸುಧಾ,ಶೋಭಾ ,ಸುರೇಶ್ ಯಾದವ್ ಹಾಗೂ ಎಲ್ಲಾ ವಿಭಾಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಶನಿವಾರದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.





