ಮಸ್ಕಿ : ಸ್ಥಳೀಯ ಮಟ್ಟದಿಂದ ತೆರಿಗೆ ವಸೂಲಾತಿಯಿಂದ ಗ್ರಾಮ ಪಂಚಾಯತಿಗಳ ಸ್ವಂತ ಸಂಪನ್ಮೂಲ ವೃದ್ಧಿಯಾಗಲಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅನುಕೂಲವಾಗುತ್ತದೆ ಹಾಗೂ ಗ್ರಾಮ ಪಂಚಾಯತಿಗಳ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿದೆ 2024-25ನೇ ಸಾಲಿನಲ್ಲಿ 2.53 ಕೋಟಿ ಸಂಗ್ರಹಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ರಾಯಚೂರು ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಅದರಲ್ಲೂ ಮಸ್ಕಿ ತಾಲೂಕು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಮಸ್ಕಿ ತಾಲೂಕು ಕೇಂದ್ರವು ಮೂರು ತಾಲೂಕಿನ ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿನ ಸುಮಾರು 161
ನೀರಾವರಿ ಮತ್ತು ಒಣ ಬೇಸಾಯ ಆಶ್ರಿತ ಗ್ರಾಮಗಳನ್ನು ಸೇರಿಸಿ 21 ಗ್ರಾಪಂಗಳನ್ನುಒಳಗೊಂಡಿದೆ.ತಾಲೂಕಿನಲ್ಲಿ ಇವರೆಗೂ ಪೂರ್ಣ ಪ್ರಮಾಣದಲ್ಲಿ ತಾಲೂಕು ಕಚೇರಿಗಳಿಲ್ಲದೆ ಜನರು ಹಾಗೂ ಅಧಿಕಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ ಆದರೂ ಸಹ ಗ್ರಾಮ ಮಟ್ಟದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಶೇ.100%ರಷ್ಟು ತೆರಿಗೆ ಸಂಗ್ರಹ: ಮಸ್ಕಿ ತಾಲೂಕಿನ 21 ಗ್ರಾಮ ಪಂಚಾಯತಗಳಿಗೆ ಕಳೆದ ಆರ್ಥಿಕ ವರ್ಷಕ್ಕೆ 4.49 ಕೋಟಿ ರೂ. ಕರ ವಸೂಲಾತಿ ಗುರಿ ನಿಗದಿಪಡಿಸಲಾಗಿತ್ತು. ಇದರಲ್ಲಿ 2.53 ಕೋಟಿ ರೂ. ತೆರಿಗೆ ಸಂಗ್ರಹಿಸಿ ಶೇ. 56.43 ಪ್ರಗತಿ ಸಾಧಿಸಲಾಗಿದೆ 21 ಗ್ರಾಪಂಗಳಲ್ಲಿ ಹಿರೇದಿನ್ನಿ, ತೋರಣದಿನ್ನಿ, ವಟಗಲ ಗ್ರಾಮ ಪಂಚಾಯತಗಳ ಲ್ಲಿ ಶೇ. 100 ತೆರಿಗೆ ವಸೂಲಿ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮೂಲ ಸೌಲಭ್ಯಒದಗಿಸಲು ಅನುಕೂಲ: ಗ್ರಾಮೀಣಾಭಿವೃದ್ಧಿಯ ವಿಕೇಂದ್ರಿಕರಣದಲ್ಲಿ ಗ್ರಾಮ ಪಂಚಾಯತಿಗಳು ನಿರ್ಣಾಯಕ ಪಾತ್ರ ನಿರ್ವಹಿಸುತ್ತಿವೆ. ಸ್ಥಳೀಯರಿಗೆ ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಶೌಚಾಲಯ ನಿರ್ಮಾಣ, ಆಸ್ತಿಗಳಿಗೆ ಸಂಬಂಧಿಸಿದ ದಾಖಲೆ ಪತ್ರ ವಿತರಣೆ, ಉದ್ಯೋಗ ಖಾತ್ರಿ, ಜನನ ಮತ್ತು ಮರಣ ಪ್ರಮಾಣ ಪತ್ರ ವಿತರಣೆ ಸೇರಿ ಪ್ರತಿಯೊಂದು ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಗ್ರಾಪಂಗಳು ಸ್ಥಳೀಯರಿಗೆ ಬಹಳಷ್ಟು ಅನುಕೂಲ ಕಲ್ಪಿಸಿವೆ. ಕರ ವಸೂಲಿಗಾರರು, ನೀರು ಗಂಟಿ, ಗ್ರಂಥ ಪಾಲಕರು ಸೇರಿ ವಿವಿಧ ಸಿಬ್ಬಂದಿ ವೇತನ, ಇನ್ನಿತರ ಕಚೇರಿ ಖರ್ಚಿಗಾಗಿ ಗ್ರಾಮ ಪಂಚಾಯತಿಗಳು ತೆರಿಗೆ ವಸೂಲಾತಿಯಿಂದ ಸಂಗ್ರಹವಾಗುವ ಹಣವನ್ನು ಆಶ್ರಯಿಸಿವೆ. ಹೀಗಾಗಿ ಗ್ರಾಪಂಗಳ ಸುಗಮ ಆಡಳಿತಕ್ಕಾಗಿ ತೆರಿಗೆ ವಸೂಲಾತಿ ನಿರ್ಣಾಯಕವಾಗಲಿದೆ. ಹೀಗಾಗಿ ಮಸ್ಕಿ ತಾಲೂಕಿನ 21 ಗ್ರಾಮ ಪಂಚಾಯತಿಗಳಲ್ಲಿ ಕೈಗೊಂಡ ನಿರಂತರ ಅಭಿಯಾನದ ಪರಿಣಾಮವಾಗಿ ತೆರಿಗೆ ವಸೂಲಾತಿಯಲ್ಲಿ ಮೇಲುಗೈ ಸಾಧಿಸಿದೆ.
ಗ್ರಾಮನಿಂದ ತೆರಿಗೆ ವಸೂಲಾತಿ ಅಭಿಯಾನ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಣೆ ಮಾಡಲು ಜಿಪಂಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕುಮಾರ್ ಕಾಂದೂ ಅವರ ನಿರ್ದೇಶನದಂತೆ ಪ್ರತಿ ಗುರುವಾರ ತೆರಿಗೆ ವಸೂಲಾತಿ ಅಭಿಯಾನ ಕೈಗೊಳ್ಳಲಾಗಿತ್ತು. ಅದರಂತೆ ಇಲ್ಲಿನ ತಾಲೂಕು ಪಂಚಾಯತ್ ಅಧಿಕಾರಿ ಗಳು ಕಾಳಜಿ ವಹಿಸಿ ನಿರಂತರವಾಗಿ ಪ್ರತಿ ನಿತ್ಯ ವಿಸಿ ಮೂಲಕ ಸಭೆ ಕರೆದು, ವಿಚಾರಿಸಿದ ಪರಿಣಾಮವಾಗಿ ತೆರಿಗೆ ವಸೂಲಾತಿಯಲ್ಲಿ ಮಸ್ಕಿ ತಾಪಂ ಮೇಲುಗೈ ಸಾಧಿಸಿದೆ. ಅದರಲ್ಲೂ ಮಾರ್ಚ್ ತಿಂಗಳು ಸಂಪೂರ್ಣ ತೆರಿಗೆ ವಸೂಲಾತಿಗೆ ಆದ್ಯತೆ ನೀಡಿದ ಪರಿಣಾಮ ತೃಪ್ತಿಕರ ಫಲಿತಾಂಶ ದೊರೆತಿದೆ.ತೆರಿಗೆ ಪಾವತಿಸುವಂತೆ ಸ್ಥಳೀಯರ ಮನವೊಲಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಮುಂಭಾಗ, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಅಳವಡಿಸಿ, ಕಸ ವಿಲೇವಾರಿ ವಾಹನ, ದೇವಸ್ಥಾನದ ಮೈಕ್ ಗಳಲ್ಲಿ ವ್ಯಾಪಕ ಪ್ರಚಾರ ಕೈಗೊಂಡಿದ್ದರಿಂದ ಗಮನಾರ್ವಾಗಿ ತೆರಿಗೆ ವಸೂಲಾತಿಯಾಗಿದೆ. ಆಯಾ ಗ್ರಾಪಂ ಪಿಡಿಒಗಳ ನೇತೃತ್ವದಲ್ಲಿ ಗ್ರಾಪಂ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಕರ ವಸೂಲಿಗಾರರು, ಕಂಪ್ಯೂಟರ್ ನಿರ್ವಾಹಕರು, ನೀರು ಗಂಟಿಗಳು, ಬಿಎಫ್ಟಿ, ಜಿಕೆಎಂ ಸೇರಿ ಎಲ್ಲಾ ಗ್ರಾಪಂ ಸಿಬ್ಬಂದಿ ಮನೆ ಮನೆಗೆ ತೆರಳಿ ಕರ ವಸೂಲಿಗೆ ಕೈಜೋಡಿಸುವ ಮೂಲಕ ತೆರಿಗೆ ಸಂಗ್ರಹಣೆಯಲ್ಲಿ ಮುಂಚೂಣಿಯಲ್ಲಿ ಇದ್ದಾರೆ.
ಕೋಟ್:–
ಜಿಪಂನ ಮೇಲಧಿಕಾರಿಗಳ ನಿರ್ದೇಶನದಂತೆ ತೆರಿಗೆ ವಸೂಲಾತಿಯಲ್ಲಿ ನಿಗಾ ವಹಿಸಿ ದಾಖಲೆ ಪ್ರಮಾಣದಲ್ಲಿ ತೆರಿಗೆ ಸಂಗ್ರಹಿಸಲಾಗಿದೆ. ಇದರಿಂದ ಗ್ರಾಪಂ ಸಿಬ್ಬಂದಿ ವೇತನ, ಇನ್ನಿತರ ಖರ್ಚು ವೆಚ್ಚಗಳಿಗೆ ಹಣ ಖರ್ಚಾಗಲಿದೆ. ಪ್ರಥಮ ಸ್ಥಾನ ಪಡೆಯಲು ಶ್ರಮಿಸಿದ ಎಲ್ಲಾ ಸಿಬ್ಬಂದಿಗಳಿಗೆ ಹಾಗೂ ನಿಗದಿತ ಸಮಯದಲ್ಲಿಿಕರ ಪಾವತಿ ಮಾಡಿದ ಎಲ್ಲರಿಗೂ ಧನ್ಯವಾದಗಳು ಸಲ್ಲಿಸುವುದಾಗಿ ತಿಳಿಸಿದರು.- ಅಮರೇಶ ಯಾದವ. ಕಾರ್ಯನಿರ್ವಾಹಕ ಅಧಿಕಾರಿಗಳು ತಾಪಂ ಮಸ್ಕಿ

