ಸಿಂಧನೂರು : ದೇಶದ ಅಭಿವೃದ್ಧಿಗೆ ಮೂಲ ಆಧಾರವಾಗಿರುವ ಜನಗಣತಿ ಕಾರ್ಯವನ್ನು ಜವಾಬ್ದಾರಿಯಿಂದ ಮತ್ತು ನಿಖರವಾಗಿ ನಡೆಸಬೇಕು ಎಂದು ಸಿಂಧನೂರು ತಹಶೀಲ್ದಾರ್ ಅರುಣ್ ದೇಸಾಯಿ ಅವರು ಹೇಳಿದರು.
ತಾಲ್ಲೂಕಿನಲ್ಲಿ ನಡೆಯಲಿರುವ ಜನಗಣತಿ–2027 ಕಾರ್ಯದ ಹಿನ್ನೆಲೆಯಲ್ಲಿ ಗಣತಿ ಸಿಬ್ಬಂದಿ (Enumerators) ಹಾಗೂ ಮೇಲ್ವಿಚಾರಕರು (Supervisors)ಗಳಿಗೆ ಆಯೋಜಿಸಲಾದ ತರಬೇತಿ ಕಾರ್ಯಕ್ರಮವನ್ನು ಸಿಂಧನೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಅವರು ಉದ್ಘಾಟಿಸಿ ಮಾತನಾಡಿದರು.
ಜನಗಣತಿ ದೇಶದ ಜನಸಂಖ್ಯೆ, ಆರ್ಥಿಕ ಪರಿಸ್ಥಿತಿ, ಶಿಕ್ಷಣ, ಉದ್ಯೋಗ, ವಾಸಸ್ಥಿತಿ ಸೇರಿದಂತೆ ವಿವಿಧ ಸಾಮಾಜಿಕ ಮಾಹಿತಿಗಳನ್ನು ಸಂಗ್ರಹಿಸುವ ಅತ್ಯಂತ ಮಹತ್ವದ ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಸರ್ಕಾರದ ಜನಕಲ್ಯಾಣ ಯೋಜನೆಗಳ ರೂಪುರೇಷೆ ತಯಾರಿಕೆಯಲ್ಲಿ ಜನಗಣತಿ ಮಾಹಿತಿಯು ಪ್ರಮುಖ ಪಾತ್ರವಹಿಸುತ್ತದೆ ಎಂದು ಅವರು ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಗಣತಿ ಸಿಬ್ಬಂದಿಗೆ ಮನೆಮನೆಗೆ ಭೇಟಿ ನೀಡುವ ವಿಧಾನ, ಮಾಹಿತಿ ಸಂಗ್ರಹಣೆಯ ನಿಯಮಗಳು, ಡಿಜಿಟಲ್ ಸಾಧನಗಳ ಬಳಕೆ, ಮಾಹಿತಿಯ ಗೌಪ್ಯತೆ ಕಾಪಾಡುವ ವಿಧಾನ ಹಾಗೂ ಸಾರ್ವಜನಿಕರೊಂದಿಗೆ ಸಮನ್ವಯ ಸಾಧಿಸುವ ಬಗ್ಗೆ ಸಮಗ್ರ ಮಾರ್ಗದರ್ಶನ ನೀಡಲಾಯಿತು.
ಸಿಂಧನೂರು ತಾಲ್ಲೂಕಿನಲ್ಲಿ ಜನಗಣತಿ ಕಾರ್ಯಕ್ಕಾಗಿ ಒಟ್ಟು ಸುಮಾರು 745 ಗಣತಿದಾರರು ನೇಮಕಗೊಂಡಿದ್ದು, ತರಬೇತಿ ಪಡೆದ ಸಿಬ್ಬಂದಿ ಏಪ್ರಿಲ್ 16, 2026ರಿಂದ ಕ್ಷೇತ್ರಮಟ್ಟದ ಕಾರ್ಯವನ್ನು ಪ್ರಾರಂಭಿಸಲಿದ್ದಾರೆ.
ಜನಗಣತಿಯ ಮೊದಲ ಹಂತವಾಗಿ ಸ್ವಯಂ ಗಣನೆ (Self Enumeration) ಪ್ರಕ್ರಿಯೆ ಏಪ್ರಿಲ್ 1ರಿಂದ ಏಪ್ರಿಲ್ 15, 2026ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ತಾವೇ ತಮ್ಮ ಕುಟುಂಬದ ವಿವರಗಳನ್ನು ಆನ್‌ಲೈನ್ ಮೂಲಕ
👉 https://se.census.gov.in⁠�
ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ.
ಇದಾದ ಬಳಿಕ ಏಪ್ರಿಲ್ 16ರಿಂದ ಮೇ 15, 2026ರವರೆಗೆ ಗಣತಿ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.
ಜನಗಣತಿ ಕಾರ್ಯ ಯಶಸ್ವಿಯಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಗಣತಿ ಸಿಬ್ಬಂದಿಗೆ ಸರಿಯಾದ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡುವ ಮೂಲಕ ನಾಗರಿಕರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ತಹಶೀಲ್ದಾರ್ ಅರುಣ್ ದೇಸಾಯಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಆಡಳಿತದ ಅಧಿಕಾರಿಗಳು, ತರಬೇತಿ ನಿರ್ವಾಹಕರು ಹಾಗೂ ಗಣತಿ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *