ತಾಳಿಕೋಟಿ: ಮನದಲ್ಲಿ ಭಕ್ತಿ ಶ್ರದ್ಧೆಯಿಂದ ಪೂಜಿಸುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀ ರೇಣುಕಾ ಎಲ್ಲಮ್ಮ ತಾಯಿ ಮಹಾನ್ ಶಕ್ತಿ ದೇವತೆ ಯಾಗಿದ್ದಾಳೆ ಎಂದು ನಾವದಗಿ ಬ್ರಹನ್ಮಠದ ಷ.ಬ್ರ. ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಸುಕ್ಷೇತ್ರ ಅಸ್ಕಿ ಗ್ರಾಮದಲ್ಲಿ ಶ್ರೀ ರೇಣುಕಾ ಎಲ್ಲಮ್ಮ ತಾಯಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಬುಧವಾರ ಆಶೀರ್ವಚನ ನೀಡಿದರು. ಕಳೆದ 20 ವರ್ಷಗಳಿಂದ ತಾವುಗಳು ತಾಯಿಯ ಜಾತ್ರೆಯನ್ನು ಮಾಡುತ್ತಾ ಬಂದಿರುವುದು ನೀವು ಎಲ್ಲಮ್ಮ ತಾಯಿಯ ಕುರಿತು ಹೊಂದಿರುವ ಭಕ್ತಿಯನ್ನು ಸೂಚಿಸುತ್ತದೆ. ಅವಳ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಶ್ಲಾಘನೀಯವಾದ ಕಾರ್ಯವಾಗಿದೆ. ಭೂಮಿ ಮೇಲೆ ಬದುಕಿರುವಷ್ಟು ದಿನ ಒಳ್ಳೆಯ ಪುಣ್ಯದ ಕಾರ್ಯಗಳನ್ನು ಮಾಡಿ, ಏನೆಲ್ಲ ಸಂಪಾದಿಸಿದ್ದೇವೆಯೋ ಇಲ್ಲಿಯೇ ಬಿಟ್ಟು ಹೋಗಬೇಕಾಗಿದೆ. ಎಲ್ಲಮ್ಮ ತಾಯಿ ನಿಮ್ಮೆಲ್ಲ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದರು. ಪೂಜ್ಯ ಪ್ರಭಯ್ಯ ಸ್ವಾಮಿಗಳು ಮಾತನಾಡಿ ಎಲ್ಲಮ್ಮ ತಾಯಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಪುಣ್ಯದ ಕಾರ್ಯವಾಗಿದೆ. ಸದಾ ಗುರುವಿನ ಮಾರ್ಗದರ್ಶನದಲ್ಲಿ ನಡೆಯುವಂತವರಾಗಿ, ನಾವದಗಿ ಶಿವಾಚಾರ್ಯರು ಈ ಭಾಗದಲ್ಲಿ ಧರ್ಮ ಜಾಗೃತಿಯ ಕಾರ್ಯ ಮಾಡುತ್ತಿದ್ದಾರೆ ಅವರಿಗೆ ನೀವೆಲ್ಲರೂ ಸಹಕಾರ ನೀಡಬೇಕು ಎಂದರು. ವಣಕಿಹಾಳ- ಬೆಕಿನಾಳದ ಪೂಜ್ಯ ಮಹೇಶ ಮುತ್ಯಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾಯವಾಡಗಿ ಪಂಚಹಳ್ಳಿ ಹಿರೇಮಠದ ಪೂಜ್ಯ ಪ್ರಭುಲಿಂಗಯ್ಯ ಸ್ವಾಮಿ ಹಿರೇಮಠ ನೇತೃತ್ವ ವಹಿಸಿದ್ದರು ಹಾಗೂ ಪೂಜ್ಯ ಶರಣಯ್ಯ ಸ್ವಾಮಿ ಹಿರೇಮಠ ಸಮ್ಮುಖ ವಹಿಸಿದ್ದರು. ವೇ.ಮೂ. ಶಿವಯ್ಯ ಸ್ವಾಮಿ ಹಾಗೂ ರಾಜು ಬಡಿಗೇರ ಪೂಜಾ ವಿಧಿ ವಿಧಾನಗಳನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಅಸ್ಕಿ ಗ್ರಾಮದ ಗಣ್ಯರು ಹಿರಿಯರು ಹಾಗೂ ಅಪಾರ ಸಂಖ್ಯೆಯಲ್ಲಿ ಭಕ್ತರು ಇದ್ದರು.

