ಅಂತರ್ಜಾಲ ಯುಗದಲ್ಲಿ ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇಂದಿನ ವಿಶ್ವದ ಜನಸಂಖ್ಯೆಯಲ್ಲಿ ಸುಮಾರು 36%–38% ರಷ್ಟು, ಅಂದರೆ ಸುಮಾರು 3 ಬಿಲಿಯನ್ ಜನರು ವಾಟ್ಸ್ ಆ್ಯಪ್ ಬಳಸುತ್ತಿದ್ದಾರೆ. ಈ ಅಪಾರ ಬಳಕೆಯಲ್ಲಿ ಗಮನಸೆಳೆಯುವ ಪ್ರಮುಖ ಅಂಶವೆಂದರೆ “ಸ್ಟೇಟಸ್”.
“ಸ್ಟೇಟಸ್” ಎಂದರೆ ವ್ಯಕ್ತಿಯ ಪ್ರಸ್ತುತ ಸ್ಥಿತಿ, ಮನಸ್ಥಿತಿ ಅಥವಾ ಪರಿಸ್ಥಿತಿಯನ್ನು ಸೂಚಿಸುವ ಒಂದು ಮಾರ್ಗ. ವಾಟ್ಸ್ ಆ್ಯಪ್ ನಲ್ಲಿ ಫೋಟೋ, ವಿಡಿಯೋ ಅಥವಾ ಬರಹದ ಮೂಲಕ ವ್ಯಕ್ತಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ. ಆದರೆ, ಇಂದಿನ ಯುವಜನತೆ ಸ್ಟೇಟಸ್ ಅನ್ನು ಅನಾವಶ್ಯಕವಾಗಿ ಬಳಸುತ್ತಿರುವುದು ಒಂದು ಚಿಂತಾಜನಕ ವಿಷಯವಾಗಿದೆ. ಕೆಲವರು ತಮ್ಮ ಜೀವನದ ಮೌಲ್ಯಗಳನ್ನು ಮರೆತು, ಸ್ಟೇಟಸ್‌ಗಳಲ್ಲೇ ಬದುಕುತ್ತಿರುವಂತಾಗಿದೆ.
ಸ್ಟೇಟಸ್ ಎಂಬುದು ಕೇವಲ ಗಮನ ಸೆಳೆಯುವ ಸಾಧನವಲ್ಲ; ಅದು ನಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಕನ್ನಡಿ. ಆದ್ದರಿಂದ, ನಾವು ಹಂಚಿಕೊಳ್ಳುವ ಸ್ಟೇಟಸ್ ನಮ್ಮ ವ್ಯಕ್ತಿತ್ವ, ಚಿಂತನೆ ಮತ್ತು ಸಂಸ್ಕಾರವನ್ನು ತೋರಿಸಬೇಕು.
ಒಳ್ಳೆಯ ಸ್ಟೇಟಸ್ ಹೇಗಿರಬೇಕು?
* ನಮ್ಮ ಜೀವನಕ್ಕೆ ಸಂಬಂಧಿಸಿದಿರಬೇಕು
* ತಮ್ಮ ಸಾಧನೆ ತೋರಿಸಬೇಕು.
* ಮನರಂಜನೆಯಲ್ಲಿ ಮಾಹಿತಿ ಇರಬೇಕು.
* ಇತರರಿಗೆ ಸ್ಪೂರ್ತಿ ತುಂಬುವಹಾಗಿರಬೇಕು.
* ಚಿಂತನೆ ಸುವಿಚಾರಗಳಿರಬೇಕು.
* ಸಂಸ್ಕಾರ ಸಂಸ್ಕೃತಿ ಒಳಗೊಂಡಿರಬೇಕು.
* ಮತ್ತೋಬ್ಬರನ್ನು ಸಮಾದನ ಪಡಿಸುವ ಹಾಗಿರಬೇಕು.
* ಸರಳ ಮತ್ತು ಸ್ಪಷ್ಟವಾಗಿರಬೇಕು.
* ಸಕಾರಾತ್ಮಕ ಪರೀಣಾಮ ಬೀರುವಹಾಗಿರಬೇಕು.
* ವ್ಯಕ್ತಿತ್ವ ತೋರುತ್ತದೆ.
* ಅರ್ಥಪೂರ್ಣವಾಗಿರಲಿ
* ವೈಯಕ್ತಿಕ ವಿಷಯ ಹೊರತಾಗಿರಲಿ
* ಪ್ರೇರಣದಾಯಕವಾಗಿರಲಿ
* ನೋವು ಅಥವಾ ದುಃಖ ತೋರಿಸುವ ಅವಶ್ಯಕತೆ ಇಲ್ಲ.
* ಯಾರನ್ನು ತೆಗಳಿಕೆ ಅವಶ್ಯಕತೆ ಇಲ್ಲ.
* ಸಮಾಜಿಕ ಸಂದೇಶ ಕೊಡಿ.
ಕೊನೆಯಲ್ಲಿ, “ಸ್ಟೇಟಸ್‌ನಲ್ಲಿ ನೀನಿಲ್ಲ” ಎಂಬ ಅರ್ಥವೇನೆಂದರೆ, ನಾವು ನಮ್ಮ ನಿಜವಾದ ಬದುಕನ್ನು ಮರೆತು ಕೇವಲ ಸ್ಟೇಟಸ್‌ಗಳಲ್ಲಿ ಬದುಕಬಾರದು. ನಿಜವಾದ ಜೀವನವೇ ಮುಖ್ಯ, ಸ್ಟೇಟಸ್ ಅಲ್ಲ. ಸ್ಟೇಟಸ್ ನಮ್ಮ ಜೀವನದ ಒಂದು ಭಾಗ ಮಾತ್ರ, ಜೀವನವೇ ಅಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು.
MOOD OFF ಸ್ಟೇಟಸ್ – ಅಗತ್ಯವೇ?
ಇತ್ತೀಚಿನ ದಿನಮಾನದಲ್ಲಿ ಯುವಜನರಲ್ಲಿ “MOOD OFF” ಎಂಬ ಸ್ಟೇಟಸ್ ಹಾಕುವುದು ಒಂದು ಸಾಮಾನ್ಯ ಪ್ರವೃತ್ತಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೋಡಿದರೆ, ಹಲವರ ಸ್ಟೇಟಸ್‌ಗಳಲ್ಲಿ ದುಃಖ, ಬೇಸರ, ನಿರಾಶೆ ತುಂಬಿಕೊಂಡಿರುವುದು ಕಾಣಿಸುತ್ತದೆ. ಆದರೆ, ಒಂದು ಕ್ಷಣ ಯೋಚಿಸಿದರೆ — ಇದರಿಂದ ನಮಗೆ ಏನು ಲಾಭ?
ನಿಜವಾಗಿ ನೋಡಿದರೆ, ನಮ್ಮ ಮೂಡ್ “ಆನ್” ಅಥವಾ “ಆಫ್” ಮಾಡುವ ಅಧಿಕಾರ ನಮ್ಮ ಕೈಯಲ್ಲೇ ಇದೆ. ಅದನ್ನು ಹೊರಗಿನ ಜಗತ್ತಿಗೆ ತೋರಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಬದಲಿಗೆ, ಕೆಲವರು ನಮ್ಮ ನೋವನ್ನು ಅರ್ಥಮಾಡಿಕೊಳ್ಳಬಹುದು, ಆದರೆ ಇನ್ನೂ ಕೆಲವರು ಅದನ್ನು ನೋಡಿ ಒಳಗೆ ಒಳಗೆ ಸಂತೋಷಪಡುವ ಸಾಧ್ಯತೆ ಕೂಡ ಇದೆ. ಆದ್ದರಿಂದ, ನಮ್ಮ ನಕಾರಾತ್ಮಕ ಭಾವನೆಗಳನ್ನು ಎಲ್ಲರ ಮುಂದೆ ಪ್ರದರ್ಶಿಸುವುದು ಅಗತ್ಯವಿಲ್ಲ.
ಮನಸ್ಸಿಗೆ ಬೇಸರವಾದಾಗ, ಅದನ್ನು ಸ್ಟೇಟಸ್‌ನಲ್ಲಿ ಹಾಕುವುದಕ್ಕಿಂತ, ನಮ್ಮ ಆತ್ಮೀಯರೊಂದಿಗೆ ಹಂಚಿಕೊಳ್ಳುವುದು ಉತ್ತಮ. ಯಾರ ಬಳಿ ಹೇಳಿಕೊಂಡರೆ ನಮಗೆ ನೆಮ್ಮದಿ, ಸಮಾಧಾನ ಮತ್ತು ನಿರಾಳತೆ ದೊರೆಯುತ್ತದೆ — ಅವರ ಜೊತೆ ಮಾತಾಡುವುದು ಹೆಚ್ಚು ಫಲಪ್ರದ.
ನಮ್ಮ ಮೂಡ್ ಅನ್ನು “ಆನ್” ಮಾಡುವವರು ಯಾರು?
* ಪೋಷಕರು – ನಮ್ಮ ನೋವನ್ನು ಹೃದಯದಿಂದ ಅರ್ಥಮಾಡಿಕೊಳ್ಳುವವರು
* ದಾಯಾದಿಗಳು – ನಮ್ಮ ಜೊತೆ ಸದಾ ನಿಂತಿರುವವರು
* ಆತ್ಮೀಯ ಗೆಳೆಯ/ಗೆಳತಿ – ನಮ್ಮ ಮನಸ್ಸಿಗೆ ಹತ್ತಿರವಾದವರು
* ಮಡದಿ/ಪತಿ – ನಮ್ಮ ಜೀವನದ ಸಹಯಾತ್ರಿಗಳು
ಈ ಸಂಬಂಧಗಳು ನಮ್ಮ ಜೀವನದ ನಿಜವಾದ ಶಕ್ತಿ. ಇವರು ನಮ್ಮನ್ನು ಮತ್ತೆ ನಗಿಸುವ ಸಾಮರ್ಥ್ಯ ಹೊಂದಿದ್ದಾರೆ. ಒಂದು ಸ್ಟೇಟಸ್ ಅದನ್ನು ಮಾಡಲಾರದು.
ಕೊನೆಯಲ್ಲಿ, ಜೀವನದಲ್ಲಿ ಪ್ರತಿಯೊಂದು ಭಾವನೆ ಸಹಜ. ಆದರೆ, ಅದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದೇ ಮುಖ್ಯ. “MOOD OFF” ಅನ್ನು ಜಗತ್ತಿಗೆ ತೋರಿಸುವುದಕ್ಕಿಂತ, “MOOD ON” ಆಗುವ ಮಾರ್ಗವನ್ನು ಹುಡುಕುವುದು ಉತ್ತಮ.
ನಮ್ಮ ಜೀವನ ಸ್ಟೇಟಸ್ ಅಲ್ಲ — ಅದು ಒಂದು ಅಮೂಲ್ಯ ಅವಕಾಶ. ಅದನ್ನು ಸಕಾರಾತ್ಮಕವಾಗಿ ಬದುಕೋಣ.
* MOOD OFF ಅಲ್ಲ LIFE ON ಮಾಡಿಕೊಳ್ಳೋಣ.
ಮಹಿಬೂಬ್ ಮದ್ಲಾಪುರ
ಸಂಪನ್ಮೂಲ ವ್ಯಕ್ತಿಗಳು ಮಾನ್ವಿ.

