ಸಿಂಧನೂರು: ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರದೇಶ ಜನತಾದಳ (ಜೆಡಿಎಸ್) ವತಿಯಿಂದ ಆಯೋಜಿಸಲಾದ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಕುರಿತ ಬಿಎಲ್‌ಎ ತರಬೇತಿ ಕಾರ್ಯಾಗಾರವು ಉತ್ಸಾಹಭರಿತವಾಗಿ ಹಾಗೂ ಯಶಸ್ವಿಯಾಗಿ ನಡೆಯಿತು. ಕ್ಷೇತ್ರದ ವಿವಿಧ ಮತಗಟ್ಟೆಗಳಿಂದ ಆಗಮಿಸಿದ ಬೂತ್ ಲೆವೆಲ್ ಏಜೆಂಟ್‌ಗಳು (BLA) ಕಾರ್ಯಕ್ರಮದಲ್ಲಿ ಭಾಗವಹಿಸಿ ಮತದಾರರ ಪಟ್ಟಿ ಪರಿಷ್ಕರಣೆ, ಹೊಸ ಮತದಾರರ ನೋಂದಣಿ ಹಾಗೂ ತಿದ್ದುಪಡಿ ಪ್ರಕ್ರಿಯೆಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವರು ಹಾಗೂ (KOF) ರಾಜ್ಯಾಧ್ಯಕ್ಷರಾದ ಶ್ರೀ ವೆಂಕಟರಾವ್ ನಾಡಗೌಡ ಅವರು, ಮತದಾರರ ಪಟ್ಟಿಯ ಶುದ್ಧೀಕರಣ ಪ್ರಜಾಪ್ರಭುತ್ವದ ಬಲವರ್ಧನೆಗೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. 2002ರ ನಂತರ ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯದಿರುವ ಹಿನ್ನೆಲೆಯಲ್ಲಿ ಈ ಬಾರಿ ನಡೆಯುತ್ತಿರುವ ಪರಿಷ್ಕರಣೆ ಅತ್ಯಂತ ಮಹತ್ವ ಪಡೆದಿದೆ ಎಂದರು.
2025ರ ಜನವರಿ 1ರ ಅರ್ಹತಾ ದಿನಾಂಕದ ಆಧಾರದ ಮೇಲೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಯನ್ನು 1500ರಿಂದ 1200ಕ್ಕೆ ಇಳಿಸುವ ಕ್ರಮ ಕೈಗೊಳ್ಳಲಾಗಿದೆ. ಇದರ ಪರಿಣಾಮವಾಗಿ ಮತಗಟ್ಟೆಗಳ ಸಂಖ್ಯೆ ಹೆಚ್ಚಳವಾಗಲಿದ್ದು, ಮತದಾನ ಪ್ರಕ್ರಿಯೆ ಇನ್ನಷ್ಟು ಸುಗಮವಾಗಲಿದೆ ಎಂದು ತಿಳಿಸಿದರು.
ಹೊಸದಾಗಿ ರಚನೆಯಾಗುವ ಬೂತ್‌ಗಳ ಸಂಪೂರ್ಣ ವಿವರಗಳನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ (CEO) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಈಗಾಗಲೇ ಸೆಪ್ಟೆಂಬರ್ 23ರಂದು ರಾಜ್ಯದಾದ್ಯಂತ 50,000ಕ್ಕೂ ಹೆಚ್ಚು ಬೂತ್ ಲೆವೆಲ್ ಅಧಿಕಾರಿಗಳಿಗೆ (BLO) ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತದಾರರ ಅಂಕಿಅಂಶಗಳನ್ನು ಹಂಚಿಕೊಂಡ ಅವರು, ಒಟ್ಟು ಮತದಾರರು 5,52,08,56 ಇದ್ದು, ಪುರುಷ ಮತದಾರರು 2,75,62,634 ಹಾಗೂ ಮಹಿಳಾ ಮತದಾರರು 2,76,40,836 ಇದ್ದಾರೆ ಎಂದರು. ರಾಜ್ಯದಲ್ಲಿ ಒಟ್ಟು 58,932 ಮತಗಟ್ಟೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಥಮ ಬಾರಿಗೆ ಮತದಾನ ಮಾಡುವವರು 8,02,423 ಜನರಿದ್ದಾರೆ. ವಿಕಲಚೇತನ ಮತದಾರರು 6,28,554 ಹಾಗೂ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಸುಮಾರು 2,20,000 ಜನರಿದ್ದಾರೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಶ್ರೀ ಬಸವರಾಜ್ ನಾಡಗೌಡ ಅವರು ಮಾತನಾಡಿ, ಪಕ್ಷದ ಕಾರ್ಯಕರ್ತರು ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರತಿಯೊಬ್ಬ ಅರ್ಹ ಮತದಾರನಿಗೂ ಮತದಾನದ ಹಕ್ಕು ದೊರಕುವಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಅಭಿಷೇಕ್ ನಾಡಗೌಡ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬಿಎಲ್‌ಎ ಸದಸ್ಯರು ಉಪಸ್ಥಿತರಿದ್ದು, ತರಬೇತಿ ಕಾರ್ಯಾಗಾರವು ಯಶಸ್ವಿಯಾಗಿ ಸಮಾಪ್ತಿಯಾಯಿತು.


