ಕಣ್ಣೂರು/ತಿಕ್ಕರಿಪುರ:
ಕೇರಳ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್. ಬೋಸರಾಜು ಅವರು ಸೋಮವಾರ ಕೇರಳದ ಕಣ್ಣೂರು ಮತ್ತು ತಿಕ್ಕರಿಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.
ಕಣ್ಣೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಓ. ಮೋಹನ್ ಅವರ ಪರವಾಗಿ ಮತಯಾಚಿಸಿದ ಸಚಿವರು, ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.
“ಭಾರತದ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ನ್ಯಾಯದ ರಕ್ಷಣೆಯಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಅನನ್ಯ. ದೇಶದ ಮೂಲಸೌಕರ್ಯದಿಂದ ಹಿಡಿದು ಸಾಮಾನ್ಯ ಜನರ ಬದುಕಿನ ಸುಧಾರಣೆಯವರೆಗೆ ಕಾಂಗ್ರೆಸ್ ಆಡಳಿತದ ಛಾಪು ಇದೆ,” ಎಂದು ಸ್ಮರಿಸಿದರು.
ಕಾಂಗ್ರೆಸ್ ನೀಡಿದ ಪ್ರತಿಯೊಂದು ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸಲು ಪಕ್ಷ ಬದ್ಧವಾಗಿದೆ. ಜನಪರ ಆಡಳಿತಕ್ಕಾಗಿ ಮತದಾರರು ಕಾಂಗ್ರೆಸ್ ಕೈಹಿಡಿಯಬೇಕು ಎಂದು ಮನವಿ ಮಾಡಿದರು.
ನಂತರ ತಿಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವರು ಬೃಹತ್ ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು ಕೆಳಗಿನ ಅಂಶಗಳನ್ನು ಒತ್ತಿ ಹೇಳಿದರು.
ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಇರುವ ಪಕ್ಷವಲ್ಲ, ಇದು ಸ್ವಾತಂತ್ರ್ಯ ಪೂರ್ವದಿಂದಲೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿರುವ ಸಂಘಟನೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಜನಪರ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಮಾದರಿಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಇದೇ ರೀತಿಯ ಸಮಗ್ರ ಅಭಿವೃದ್ಧಿ ಕೇರಳದಲ್ಲೂ ಮುಂದುವರಿಯಲು ಕಾಂಗ್ರೆಸ್ ಗೆಲುವು ಅನಿವಾರ್ಯ.
“ಸರ್ವ ಜನಾಂಗದ ಶಾಂತಿಯ ತೋಟ” ನಿರ್ಮಿಸಲು, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆ ಸಾಧಿಸಲು ಮತದಾರರು ಹಸ್ತದ ಗುರುತಿಗೆ ಮತ ನೀಡಬೇಕು ಎಂದು ಕರೆ ನೀಡಿದರು.
ಸಚಿವರ ಪ್ರಚಾರದ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು,ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದರು. ಪ್ರಚಾರದ ಉದ್ದಕ್ಕೂ ‘ಕಾಂಗ್ರೆಸ್ ಗೆಲುವಿನ ಘೋಷಣೆಗಳು’ ಮುಗಿಲು ಮುಟ್ಟಿದ್ದವು.

Leave a Reply

Your email address will not be published. Required fields are marked *