ತಾಳಿಕೋಟೆ: ಸದೃಢ ಸಮಾಜ ನಿರ್ಮಾಣವಾಗಲು ಪುರುಷ ಮತ್ತು ಮಹಿಳೆಯರೂ ಸಮನಾಗಿರಬೇಕು. ಮಹಿಳೆ ಸಶಕ್ತವಾಗದೇ ಸದೃಢ ಸಮಾಜ ನಿರ್ಮಾಣವಾಗದು ಎಂದು ಎಸ್.ಕೆ. ಕಾಲೇಜಿನ ಉಪನ್ಯಾಸಕಿ ಅಶ್ವಿನಿ ಜೋಗೂರ ಹೇಳಿದರು. ಅವರು ಸ್ಥಳೀಯ ಕನ್ನಡ ಸಂಘದ ವತಿಯಿಂದ ಪಟ್ಟಣದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮತಾಯಿ ದೇವಸ್ಥಾನದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ಮಾತನಾಡಿದರು.
ಮಹಿಳೆಯು ನಿರ್ಧಾರಗಳಲ್ಲಿ ಸ್ವಂತಿಕೆಯುಳ್ಳವರಾಗಬೇಕು ಭದ್ರತೆ ಹೊಮದಬೇಕು ಗೌರವ ಮನ್ನಣೆ ಸಿಗಬೇಕು. ತನಗಾದ ಅನ್ಯಾಯದ ವಿರುದ್ಧ ಭಯವಿಲ್ಲದೇ ಧ್ವನಿಯೆತ್ತಬೇಕು. ನಾಲ್ಕು ಗೋಡೆಗಳ ಬಂಧನ ಕಳಚಿ ತನ್ನ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರಾಡುವ ಸ್ಥಿತಿ ನಿರ್ಮಾಣವಾದಾಗ ಮಹಿಳೆ ಸಶಕ್ತಳು ಆದರೆ ಲಿಂಗ ತಾರತಮ್ಯ, ಅಸುರಕ್ಷತೆ ಭಾವನೆ ಇಂದಿಗೂ ತಪ್ಪಿಲ್ಲವೆಂದರು.
ಮುಖ್ಯ ಅತಿಥಿಗಳಾಗಿದ್ದ ಎಸ್.ಕೆ.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶೇಷಾಚಲ ಹವಾಲ್ದಾರ(ಚೇಚಿ) ಮಾತನಾಡಿ, ತಾಳಿಕೋಟೆ ನಿಂತಿರುವುದೇ ಮಹಿಳೆಯ ತ್ಯಾಗದಿಂದ ಎನ್ನುವುದನ್ನು ಮರೆಯಬಾರದು. ಮಹಿಳೆಯರಿಗೆ ಅವಕಾಶಗಳನ್ನು ಒದಗಿಸಬೇಕು ಎಂದರು. ಪರಿಶ್ರಮವಿಲ್ಲದೇ ಫಲ ದೊರೆಯದು ಪ್ರತಿ ಸಾಧನೆಯ ಹಿಂದೆ ಪರಿಶ್ರಮವಿದೆ ಎಂದರು.
ಕನ್ನಡ ಸಂಘದ ಅಧ್ಯಕ್ಷ ಡಾ.ವಿ.ಎಸ್.ಕಾರ್ಚಿ ಮಾತನಾಡಿ, ಮೊಬೈಲ್ ಬಳಕೆ ನಮ್ಮನ್ನು ದಾರಿ ತಪ್ಪಿಸುತ್ತಿದ್ದು ಅದನ್ನು ಮಿತವಾಗಿ ಅವಶ್ಯಕತೆಯಿದ್ದಷ್ಟು ಮಾತ್ರ ಬಳಸುವಂತೆ ತಿಳಿಸಿದರು.
ಸಾನ್ನಿಧ್ಯವನ್ನು ವಹಿಸಿದ್ದ ಆಧ್ಯಾತ್ಮಿಕ ಚಿಂತಕರಾದ ಶರಣೆ ಕಾಶಿಬಾಯಿ ನಾಗೂರಮಠ, ಶರಣೆ ಶಾಂತಮ್ಮ ತಾಯಿ ಕೋಳೂರ ಶಿವಶರಣೆ ಕಾಶಿಬಾಯಿ ಭಂಟನೂರ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಕನ್ನಡ ಸಂಘದ ಉಪಾಧ್ಯಕ್ಷೆ ಸುಮಂಗಲಾ ಕೋಳೂರ ವಹಿಸಿ ಮಾತನಾಡಿದರು.
ಕನ್ನಡ ಸಂಘದ ಸಹ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ರುದ್ರಮ್ಮ .ಬಿ.ದೇಸಾಯಿ ಸ್ವಾಗತಿಸಿದರು. ರತ್ನಾ ಹಂಗರಗಿ ಮತ್ತು ಸುವರ್ಣಾ ಗದ್ದಗಿಮಠ ನಿರ್ವಹಿಸಿದರು. ಭುವನೇಶ್ವರಿ ಬಿರಾದಾರ ವಂದಿಸಿದರು.

ಸಾಧಕ ಮಹಿಳೆಯರಾದ ಖ್ಯಾತ ಮಹಿಳಾ ವೈದ್ಯೆ ಡಾ. ಸರೋಜಿನಿ ವಿ.ಕಾರ್ಚಿ, ಕದಳಿ ವೇದಿಕೆಯ ಅಧ್ಯಕ್ಷೆ ಉಮಾ ಘಿವಾರಿ, ಯೋಗ ಸಾಧಕಿ ಸುರೇಖಾ ಸಾಲಂಕಿ,ಸ್ಥಳೀಯ ಅರ್ಬನ್ ಬ್ಯಾಂಕ್ ವ್ಯವಸ್ಥಾಪಕಿ ಬಸಮ್ಮ ಮಣೂರ, ಕೆಪಿಎಸ್ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಅನಿತಾ ಸಜ್ಜನ, ಸಾಹಿತಿ, ಶಿಕ್ಷಕಿ ಮಡಿವಾಳಮ್ಮ ನಾಡಗೌಡ ಅವರುಗಳನ್ನು ಗೌರವಿಸಲಾಯಿತು.
ಕನ್ನಡ ಸಂಘದ ಪದಾಧಿಕಾರಿಗಳು, ಇತರ ಗಣ್ಯರು, ಮಹಿಳೆಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *