ದಾವಣಗೆರೆ ಉಪಚುನಾವಣೆಯಲ್ಲಿ ಮೇಜರ್ ಟ್ವಿಸ್ಟ್ ಪಕ್ಷೇತರ ಅಭ್ಯರ್ಥಿ ಸಾದಿಕ್ ಪೈಲ್ವಾನ್ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಘೋಷಣೆ.-
ದಾವಣಗೆರೆ: ರಾಜ್ಯದ ಗಮನ ಸೆಳೆದಿರುವ ದಾವಣಗೆರೆ ಉಪಚುನಾವಣೆಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ಉಪಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು.
ಮುಖ್ಯಮಂತ್ರಿಗಳೊಂದಿಗೆ ನಡೆದ ಚರ್ಚೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾದಿಕ್ ಪೈಲ್ವಾನ್ ಅವರು, ಕ್ಷೇತ್ರದ ಅಭಿವೃದ್ಧಿ ಹಾಗೂ ಜನಪರ ಆಡಳಿತದ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಿದ್ಧಾರ್ಥ್ ಶಾಮನೂರು ಅವರಿಗೆ ನಿರ್ಭಂಧಿತ ಬೆಂಬಲ ನೀಡುವುದಾಗಿ ಘೋಷಿಸಿದರು.
ದಾವಣಗೆರೆ ಕ್ಷೇತ್ರದ ಸಮಗ್ರ ಅಭಿವೃದ್ಧಿ, ರಸ್ತೆ, ನೀರು, ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ವೃದ್ಧಿಗೆ ಸ್ಥಿರ ಆಡಳಿತ ಅಗತ್ಯವಿದೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಪರ ಯೋಜನೆಗಳು ಜನರಿಗೆ ಅನುಕೂಲವಾಗಲಿದ್ದು, ತಮ್ಮ ಬೆಂಬಲಿಗರು ಹಾಗೂ ಅಭಿಮಾನಿಗಳು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕ್ಷೇತ್ರದ ಅಭಿವೃದ್ಧಿಗೆ ಎಲ್ಲ ವರ್ಗದ ನಾಯಕರು ಒಂದಾಗಿ ಕೆಲಸ ಮಾಡುತ್ತಿರುವುದು ಸಂತೋಷಕರ ಸಂಗತಿ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಜನತೆ ಭಾರಿ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಾದಿಕ್ ಪೈಲ್ವಾನ್ ಅವರ ಬೆಂಬಲ ಘೋಷಣೆಯಿಂದ ದಾವಣಗೆರೆ ಉಪಚುನಾವಣೆಯ ರಾಜಕೀಯ ಸಮೀಕರಣದಲ್ಲಿ ಗಮನಾರ್ಹ ಬದಲಾವಣೆ ಉಂಟಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಇದು ಹೆಚ್ಚುವರಿ ಬಲ ನೀಡುವ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಪೈಲ್ವಾನ್ ಬೆಂಬಲಿಗರು ಉಪಸ್ಥಿತರಿದ್ದು, ಮುಂದಿನ ಚುನಾವಣಾ ತಂತ್ರಗಳ ಕುರಿತು ಚರ್ಚೆ ನಡೆಸಿದರು. ಸುರ್ಜೀವಾಲ , ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ್, ಶಾಸಕ ರಿಜ್ವಾನ್ ಅರ್ಷದ್, ಸಲೀಂ ಅಹ್ಮದ್ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.


