ಕೇರಳ : ಕೇರಳ ವಿಧಾನಸಭಾ ಚುನಾವಣೆಯ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ ಎಸ್ ಬೋಸರಾಜು ಅವರು ಕೇರಳದ ಕಣ್ಣೂರು ಜಿಲ್ಲೆಯ ಕಣ್ಣೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ಓ ಮೋಹನ್ ಅವರ ಪರ ಉತ್ಸಾಹಭರಿತ ಚುನಾವಣಾ ಪ್ರಚಾರ ನಡೆಸಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವರು, ಸ್ವಾತಂತ್ರ್ಯೋತ್ತರ ಭಾರತದ ನಿರ್ಮಾಣದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಶಿಕ್ಷಣ, ಆರೋಗ್ಯ, ಕೈಗಾರಿಕೆ, ಕೃಷಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರಗಳು ನೀಡಿರುವ ಕೊಡುಗೆಗಳು ದೇಶದ ಪ್ರಗತಿಗೆ ಬಲವಾದ ಅಡಿಪಾಯವಾಗಿವೆ ಎಂದು ಅವರು ತಿಳಿಸಿದರು.
ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರಗಳು ಸದಾ ಬದ್ಧವಾಗಿವೆ. ಬಡವರು, ರೈತರು, ಮಹಿಳೆಯರು, ಕಾರ್ಮಿಕರು ಹಾಗೂ ಯುವಕರ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಹೇಳಿದರು.
ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳು ಜನತೆಗೆ ನೀಡಿದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜನರ ವಿಶ್ವಾಸ ಗಳಿಸಿವೆ. ನುಡಿದಂತೆ ನಡೆದು ಜನಪರ ಆಡಳಿತ ನೀಡುವ ರಾಜಕೀಯ ಶಕ್ತಿ ಕಾಂಗ್ರೆಸ್ ಮಾತ್ರವಾಗಿದ್ದು, ಕೇರಳದಲ್ಲಿಯೂ ಅದೇ ರೀತಿಯ ಅಭಿವೃದ್ಧಿ ತರಲು ಕಾಂಗ್ರೆಸ್ ಅಭ್ಯರ್ಥಿಯನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಪ್ರಚಾರ ಮೆರವಣಿಗೆಯ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಉತ್ಸಾಹ ವ್ಯಕ್ತಪಡಿಸಿದರು. ಯುವಕರು, ಮಹಿಳಾ ಘಟಕದ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಚುನಾವಣಾ ವಾತಾವರಣಕ್ಕೆ ಮತ್ತಷ್ಟು ಚೈತನ್ಯ ತುಂಬಿದರು.
ನಂತರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಸಚಿವರು, ಸ್ಥಳೀಯ ನಾಯಕರು ಮತ್ತು ಚುನಾವಣಾ ಸಂಚಾಲಕರೊಂದಿಗೆ ಸಭೆ ನಡೆಸಿ ಮತದಾರ ಸಂಪರ್ಕ ಕಾರ್ಯಕ್ರಮಗಳು, ಬೂತ್ ಮಟ್ಟದ ಸಂಘಟನೆ ಬಲವರ್ಧನೆ ಹಾಗೂ ಅಂತಿಮ ಹಂತದ ಚುನಾವಣಾ ತಂತ್ರಗಾರಿಕೆ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಮಾರ್ಟಿನ್ ಜಾರ್ಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಮಾಜಿ ಶಾಸಕ ವೇಣುಗೋಪಾಲ್, ಪಕ್ಷದ ಹಿರಿಯ ಮುಖಂಡರು, ಯುವ ಘಟಕದ ನಾಯಕರು ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.


