ರಾಯಚೂರು ಮಾರ್ಚ್ 17 (ಕರ್ನಾಟಕ ವಾರ್ತೆ): ಇಲ್ಲಿಯ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ 2026ರ ಮಾರ್ಚ್ ಮಾಹೆಯ ಪಡಿತರ ಧಾನ್ಯಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ಮಾರ್ಚ್ 2026 ರ ಮಾಹೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ರಾಯಚೂರು ಜಿಲ್ಲೆಯ ಕೇಂದ್ರ ವ್ಯಾಪ್ತಿಯ ಪ್ರತಿ ಅಂತ್ಯೋದಯ(ಎಎವೈ) ಪಡಿತರ ಚೀಟಿಗೆ 35 ಕೆ.ಜಿ ಸಾರವರ್ಧಿತ ಅಕ್ಕಿ ಹಾಗೂ ಕೇಂದ್ರ ವ್ಯಾಪ್ತಿಯ ಪಿ.ಹೆಚ್.ಹೆಚ್ (ಬಿಪಿಎಲ್) ಪಡಿತರ ಚೀಟಿಯಲ್ಲಿನ ಪ್ರತಿ ಫಲಾನುಭವಿಗೆ 05 ಕೆ.ಜಿ ಸಾರವರ್ಧಿತ ಅಕ್ಕಿ ಇದರ ಜೊತೆಗೆ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಏಕ ಸದಸ್ಯ, ದ್ವಿ-ಸದಸ್ಯ ಮತ್ತು ತ್ರಿ-ಸದಸ್ಯ ಎಎವೈ ಪಡಿತರ ಚೀಟಿಗಳನ್ನು ಹೊರತುಪಡಿಸಿ ನಾಲ್ಕು ಮತ್ತು ನಾಲ್ಕಕಿಂತ ಹೆಚ್ಚಿನ ಸದಸ್ಯರುಳ್ಳ ಕೇಂದ್ರ & ರಾಜ್ಯ ವ್ಯಾಪ್ತಿಯ ಅಂತ್ಯೋದಯ (ಎಎವೈ) ಮತ್ತು ಪಿ.ಹೆಚ್.ಹೆಚ್ (ಬಿಪಿಎಲ್) ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ 05 ಕೆ.ಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು.
ಒಂದು ರಾಷ್ಟ್ರ ಒಂದು ಪಡಿತರ ಚೀಟಿ (ಅಂತರ್ ರಾಜ್ಯ/ ಅಂತರ್ ಜಿಲ್ಲೆ) ಪೋರ್ಟೆಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ರಾಜ್ಯದ ಪಡಿತರ ಚೀಟಿದಾರರು ಯಾವುದೇ ವರ್ಗದ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಯಾವುದೇ ನ್ಯಾಯಬೆಲೆ ಅಂಗಡಿಕಾರರು ಕಡಿಮೆ ಪ್ರಮಾಣದ ಪಡಿತರವನ್ನು ವಿತರಣೆ ಮಾಡಿದ್ದಲ್ಲಿ, ಹಣ ಕೇಳಿದ್ದಲ್ಲಿ ಮತ್ತು ಇತರೆ ದೂರುಗಳಿಗೆ ನಿಶುಲ್ಕ ದೂರವಾಣಿ ಸಂಖ್ಯೆ 1967ಗೆ ಹಾಗೂ ತಾಲ್ಲೂಕಿನಲ್ಲಿರುವ ತಹಶೀಲ್ದಾರರ ಕಚೇರಿಗೆ ಅಥವಾ ಜಿಲ್ಲೆಯ ಉಪನಿದೇರ್ಶಕರ ಕಚೇರಿಗೆ ದೂರನ್ನು ಸಲ್ಲಿಸಬಹುದಾಗಿದೆ.
ಈ ಯೋಜನೆಯಡಿ ವಿತರಿಸಲಾದ ಆಹಾರ ಧಾನ್ಯಗಳನ್ನು ಹಣಕ್ಕಾಗಿ ಪಡಿತರ ಚೀಟಿದಾರರು ಮಾರಾಟ ಮಾಡುವುದಾಗಲಿ ಅಥವಾ ಸಂಗ್ರಹಣೆ ಮಾಡುವುದು ಕಂಡುಬಂದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ವಿತರಿಸಲಾದ ಆಹಾರ ಧಾನ್ಯಗಳಿಗೆ ಮುಕ್ತ ಮಾರುಕಟ್ಟೆ ದರಕ್ಕೆ ದಂಡ ವಿಧಿಸಲಾಗುವುದು ಮತ್ತು ಸದರಿ ಪಡಿತರ ಚೀಟಿಯನ್ನು ಆರು ತಿಂಗಳ ಅವಧಿಗೆ ಅಮಾನತ್ತುಗೊಳಿಸಲಾವುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *