ಸಮಾಜ ಹೆಣ್ಣುಮಕ್ಕಳನ್ನು ಕೇವಲ ಅಡುಗೆ ಮನೆಗೆ ಸೀಮಿತಗೊಳಿಸಲು ನೋಡುತ್ತಿದೆ. ಲಿಂಗ ಸೂಕ್ಷ್ಮ ಸಂವೇದನೆ ಎಲ್ಲರಿಗೂ ಬೇಕು. ಇದು ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಸಂಬಂಧಿಸಿದ್ದಲ್ಲ ಎನ್ನುವುದನ್ನು ವಿದ್ಯಾರ್ಥಿ, ಯುವಜನರಲ್ಲಿ ‘ಅರಿವಿನ ಪಯಣ’ದ ಮೂಲಕ ತಿಳಿವಳಿಕೆ ಮೂಡಿಸಲಾಗುತ್ತಿದೆ’ ಎಂದು ತಜ್ಞೆ ಗಿರಿಜಾ ಅಕ್ಕಿ ಹೇಳಿದರು.ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ‘ಅರಿವಿನ ಪಯಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಡಾ.ಅಂಬೇಡ್ಕರ್‌ ಅವರಂಥ ಚಿಂತಕರು ಸಮಾಜ ಸುಧಾರಣೆಗಾಗಿ ಹೋರಾಡಿದರು. ಆದರೆ, ಸಮಾಜ ಸುಧಾರಣೆ ಎಷ್ಟರ ಮಟ್ಟಿಗೆಯಾಗಿದೆ ಎನ್ನುವ ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕಾದ ಕಾಲಘಟ್ಟದಲ್ಲಿದ್ದೇವೆ. ವಾಸ್ತವವಾಗಿ ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಮಾನ ಶಿಕ್ಷಣ ನೀಡಬೇಕು. ಬಾಲ್ಯದಿಂದಲೇ ಎರಡೂ ಮಕ್ಕಳಿಗೂ ಸಂಸ್ಕಾರ, ತಿಳವಳಿಕೆ ನೀಡುತ್ತಾ ಬಂದರೆ ಅದೇ ಅರಿವಿನ ಪಯಣ’ ಎಂದರು.

‘ಕೌಟುಂಬಿಕ ಹಿಂಸೆ, ಅನಿಷ್ಟ ಪದ್ಧತಿ, ಮೂಢ ನಂಬಿಕೆಗಳು, ಬಾಲ್ಯವಿವಾಹ, ವರದಕ್ಷಿಣೆ, ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಕಾನೂನುಗಳು ಬಂದಿವೆ. ಆದರೆ, ಅವು ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ನಾವು ಬದಲಾಗಬೇಕಿದೆ. ನಮ್ಮ ಸುತ್ತಮುತ್ತಲಿನವರಿಗೆ ಒಳ್ಳೆಯದನ್ನು ಹೇಳಬೇಕಿದೆ. ನಮ್ಮೊಳಗೆ ಯಾವುದು ತಪ್ಪು, ಯಾವುದು ಸರಿ ಎನ್ನುವುದನ್ನು ಕಂಡುಕೊಳ್ಳಬೇಕಿದೆ. ಹೆಣ್ಣು-ಗಂಡು ಎರಡೂ ಸಮಾಜದ ಕಣ್ಣುಗಳು ಎನ್ನುವುದನ್ನು ಅರಿಯೋಣ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಲತಾ ಎಂ.ಎಸ್. ಮಾತನಾಡಿ, ‘ಸಮಾನತೆಗಾಗಿ ಕೇವಲ ಹೆಣ್ಣುಮಕ್ಕಳು ಮಾತ್ರ ಹೋರಾಟ ಮಾಡಿದರೆ ಸಾಲದು. ಪುರುಷರು ಕೂಡ ಹೆಣ್ಣುಮಕ್ಕಳ ಜೊತೆ ನಿಲ್ಲಬೇಕು. ಮಹಿಳೆಯರು ಸ್ವಾವಲಂಬಿಗಳಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕಿ ಶಾಂತಾದೇವಿ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕ ಅನಿಲಕುಮಾರ ವಂದಿಸಿದರು.

Leave a Reply

Your email address will not be published. Required fields are marked *