ರಾಯಚೂರು : ಇಲ್ಲಿಯ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್‌) ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರ ವೇತನ ಕಡತ, ಬಾಕಿ ವೇತನ ಬಿಡುಗಡೆಗೆ ಒತ್ತಾಯಿಸಿ ಹಾಗೂ ನೌಕರರ ಮೇಲೆ ದೌರ್ಜನ್ಯ ಖಂಡಿಸಿ ರಿಮ್ಸ್ ಹೊರಗುತ್ತಿಗೆ ನೌಕರರು ಗುರುವಾರ ರಿಮ್ಸ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ಮೈಸೂರು ಮೂಲದ ಸ್ವಿಸ್‌ಗುತ್ತಿಗೆ ಸಂಸ್ಥೆಯು ನೌಕರರ ವೇತನ ಕಡಿತಗೊಳಿಸಿದರೂ ಪಿಎಫ್, ಇಎಸ್‌ಐ ಹಣವನ್ನು ಸರಿಯಾಗಿ ಜಮಾ ಮಾಡಿಲ್ಲ. ಈ ಮೂಲಕ ಡಿ.ಗ್ರುಪ್ ನೌಕರರಿಗೆ ಅನ್ಯಾಯ ಮಾಡಲಾಗಿದೆ. ಪ್ರತಿ ತಿಂಗಳು ವೇತನ ಪಾವತಿಸುತ್ತಿಲ್ಲ. ಮೂರು, ನಾಲ್ಕು ತಿಂಗಳಿಗೊಮ್ಮೆ ವೇತನ ಕೊಡುತ್ತಿದೆ ಎಂದು ದೂರಿದರು.

ಎರಡು ತಿಂಗಳ ವೇತನ ಬಾಕಿ ಇಟ್ಟುಕೊಂಡು ಕೆಲವರಿಗೆ ವೇತನ ಪಾವತಿ ಮಾಡಿದೆ. ಕೆಲವರ ವೇತನದಿಂದ ₹3 ಸಾವಿರದಿಂದ ₹5 ಸಾವಿರ ವೇತನ ಕಡಿತಗೊಳಿಸಲಾಗಿದೆ. ಏಜೆನ್ಸಿ ಅವರಿಗೆ ಕೇಳಿದರೆ ಸಮವಸ್ತ್ರ ಬದಲಾಬಣೆಗೆ ಕಡಿತಗೊಳಿಸಿದ್ದೇವೆ ಎಂದು ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಗುತ್ತಿಗೆ ನೌಕರರಿಗೆ ಅತ್ಯಂತ ಕಡಿಮೆ ವೇತನ ಪಾವತಿ ಮಾಡಲಾಗುತ್ತಿದ್ದು, ಅದರಲ್ಲಿಯೂ ಸಮವಸ್ತ್ರದ ಹೆಸರಿನಲ್ಲಿ ₹5 ಸಾವಿರ ಕಡಿತಗೊಳಿಸಿದರೆ ಕುಟುಂಬ ನಿರ್ವಹಣೆ ಮಾಡುವುದಾದರು ಹೇಗೆ’ ಎಂದು ಪ್ರಶ್ನಿಸಿದರು.

‘ರಿಮ್ಸ್ ಬೋಧಕ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡಲು ಸಿಬ್ಬಂದಿಯ ಕೊರತೆ ಇದೆ ಮೂವರ ಕೆಲಸ ಒಬ್ಬರೇ ಮಾಡಬೇಕಿದೆ. ಗುತ್ತಿಗೆ ಸಂಸ್ಥೆಯವರು ಗೌರವಯುತವಾಗಿ ನಡೆದುಕೊಳ್ಳದೇ ಮಾನಸಿಕ ಹಿಂಸೆ ನೀಡುತ್ತಿದ್ದಾರೆ’ ಎಂದು ದೂರಿದರು.

ಪ್ರತಿಭಟನೆಯಲ್ಲಿ ಹೊರಗುತ್ತಿಗೆ ನೌಕರರಾದ ಆನಂದ, ಪ್ರಶಾಂತ, ರಮೇಶ, ಸಂದೀಪ, ನರೇಶ, ಮಲ್ಲಿಕಾರ್ಜುನ, ವಿನೋದ, ಅನುರಾಧಾ, ಸುನೀತಾ, ಪುಷ್ಪಾ, ಈರಮ್ಮ, ಶ್ರೀನಿವಾಸ, ಅಮರಮ್ಮ, ವಿಶ್ವನಾಥ, ನವೀನಕುಮಾರ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *