ಸಂವಿಧಾನದ ಶ್ರೇಷ್ಠತೆ ಅದರ ಆಶಯಗಳನ್ನು ಪಾಲಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಏಕತೆ ಭಾತೃತ್ವ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವೆಲ್ಲರೂ ಸಂಕಲ್ಪ ಮಾಡಬೇಕು. ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದ್ದು ಅದಕ್ಕೆ ಸಂವಿಧಾನವೇ ಆಧಾರ ಸ್ತಂಭವಾಗಿದೆ, ಇದರ ರಕ್ಷಣೆಗೆ ನಾವೆಲ್ಲರೂ ಮುಂದಾಗ ಬೇಕಾಗಿದೆ ಎಂದು ಕನ್ನಡ ಉಪನ್ಯಾಸಕಿ ಡಾ.ಸುಜಾತಾ ಚಲವಾದಿ ಹೇಳಿದರು. ಬುಧವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ್, ಪುರಸಭೆ ತಾಳಿಕೋಟಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಮುದ್ದೇಬಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂವಿಧಾನ ಕುರಿತು ಅವರು ಉಪನ್ಯಾಸ ನೀಡಿದರು. ಸಂವಿಧಾನದ ಪೀಠಿಕೆ ಸಂವಿಧಾನದ ಪ್ರತಿಪುಟದಲ್ಲಿ ಉಲ್ಲೇಖಿಸಲ್ಪಟ್ಟಿರುವ ಅಂಶಗಳು ನಮ್ಮ ಹಕ್ಕು ಮತ್ತು ಕರ್ತವ್ಯಗಳು ನಮ್ಮ ಬದುಕಿನ ದಾರಿಯನ್ನು ಮುನ್ನಡೆಸುವಂತಿವೆ. ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸಂವಿಧಾನ ಎತ್ತಿ ಹಿಡಿಯುತ್ತದೆ. ಡಾ.ಅಂಬೇಡ್ಕರ್ ಅವರು ತಮ್ಮ ಮಕ್ಕಳು ಹಾಗೂ ಕುಟುಂಬವನ್ನು ತ್ಯಾಗ ಮಾಡಿ ಇಂತಹ ಶ್ರೇಷ್ಠ ಸಂವಿಧಾನ ಕೊಟ್ಟು ಹೋಗಿದ್ದಾರೆ ಅದರ ಪ್ರಾಮಾಣಿಕ ಅನುಸರಣೆಗೆ ನಾವೆಲ್ಲರೂ ಮುಂದಾಗಬೇಕಾಗಿದೆ. ಈ ಶ್ರೇಷ್ಠ ಸಂವಿಧಾನವನ್ನು ಪ್ರತಿಯೊಬ್ಬರೂ ಓದಬೇಕು ಅದರಲ್ಲೂ ವಿಶೇಷವಾಗಿ ಯುವ ಸಮುದಾಯ ಸಂವಿಧಾನವನ್ನು ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು, ಪ್ರತಿ ಮನೆಯಲ್ಲಿಯೂ ಸಂವಿಧಾನದ ಅಧ್ಯಯನ ನಡೆಯುವಂತಹ ವಾತಾವರಣ ನಿರ್ಮಾಣವಾಗಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತಹಶೀಲ್ದಾರ್ ಡಾ.ವಿನಯಾ ಹೂಗಾರ ಅವರು ಮಾತನಾಡಿ ಭಾರತ ಸಂವಿಧಾನ ವಿಶ್ವದ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ ಇದೊಂದು ಮಾದರಿ ಸಂವಿಧಾನವಾಗಿದ್ದು ಇದನ್ನು ತಿಳಿದುಕೊಳ್ಳುವ ಪ್ರಯತ್ನ ವಿದ್ಯಾರ್ಥಿ ದಿಸೆಯಿಂದಲೇ ಆರಂಭವಾಗಬೇಕು. ಸಂವಿಧಾನ ದಿನಾಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಬಾರದು ಎಂದರು. ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಬಿ.ದಮ್ಮೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ನನ್ನ ಮತ ನನ್ನ ಹಕ್ಕು ಹಾಗೂ ಗಾಂಧೀಜಿ ಅವರ ಜೀವನ ಕುರಿತು ನಡೆದ ತಾಲೂಕ ಹಾಗೂ ಜಿಲ್ಲಾ ಮಟ್ಟದ ಚಿತ್ರಕಲೆ ಹಾಗೂ ಛಾಯಾಗ್ರಹಣ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆ ಓದಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.ತಾಪಂ ಇಓ ಅನಸೂಯಾ ಚಲವಾದಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ,ಪಿಎಸ್ಐ ಜ್ಯೋತಿ ಖೋತ್,ಸ.ಕ.ಇ.ಕಛೇರಿ ಅಧೀಕ್ಷಕ ಶಿವಲಿಂಗಪ್ಪ ಹಚಡದ, ದಲಿತ ಮುಖಂಡರಾದ ಮುತ್ತಪ್ಪ ಚಮಲಾಪೂರ, ಬಸವರಾಜ ಕಟ್ಟಿಮನಿ,ಜೈಭೀಮ ಮುತ್ತಗಿ,ನಿಲಯ ಪಾಲಕರಾದ ಎಸ್ ಎನ್ ಮಲ್ಲಾಡೆ ಎನ್.ವಿ.ಕೋರಿ,ಎಸ್.ಎಮ್.ಕಲಬುರ್ಗಿ,ಮಹಾಂತೇಶ ತಾಳಿಕೋಟಿ, ರೇಣುಕಾ ಪಾಟೀಲ, ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು, ಪಟ್ಟಣದ ಗಣ್ಯರು, ತಾಲೂಕಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ವೇದಿಕೆ ಕಾರ್ಯಕ್ರಮ ಮುನ್ನ ಬೆಳಿಗ್ಗೆ 9:00 ಘಂಟೆಗೆ ಡಾ.ಅಂಬೇಡ್ಕರ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಸಕಲ ವಾದ್ಯ ಮೇಳಗಳೊಂದಿಗೆ ಅಂಬೇಡ್ಕರ್ ವೃತ್ತದಿಂದ ಆರಂಭವಾಗಿ ಅಂಬಾಭವಾನಿ ಗುಡಿ,ಕತ್ರಿಬಜಾರ್, ಶಿವಾಜಿ ಸರ್ಕಲ್, ಮಹಾರಾಣಾ ಪ್ರತಾಪ್ ವೃತ್ತ, ಬಸ್ ನಿಲ್ದಾಣ ಮಾರ್ಗದಿಂದ ಡಾ. ಬಿ ಆರ್ ಅಂಬೇಡ್ಕರ್ ಭವನಕ್ಕೆ ತಲುಪಿತು.

