ರಾಯಚೂರು : ರೈಲ್ವೆ ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವ ಉದ್ದೇಶದಿಂದ ದಕ್ಷಿಣ ಮಧ್ಯ ರೈಲ್ವೆಯನ್ನು ಪುನರ್‌ವ್ಯವಸ್ಥೆಗೊಳಿಸಿ ಹೊಸದಾಗಿ ದಕ್ಷಿಣ ಕರಾವಳಿ ರೈಲ್ವೆ (SCoR) ವಲಯವನ್ನು ರಚಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಈ ಮಹತ್ವದ ಪುನರ್‌ವ್ಯವಸ್ಥೆ 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಈ ಕುರಿತು ಡಾ. ಬಾಬು ರಾವ್, ಮಾಜಿ ಸದಸ್ಯರು – ZRUCC, ದಕ್ಷಿಣ ಮಧ್ಯ ರೈಲ್ವೆ ಅವರು ಪತ್ರಿಕೆ ಪ್ರಕಟಣೆಯ ಮೂಲಕ ಮಾಹಿತಿ ನೀಡಿದ್ದಾರೆ.

 

ಪ್ರಸ್ತುತ ದಕ್ಷಿಣ ಮಧ್ಯ ರೈಲ್ವೆ (SCR)ಯ ಮುಖ್ಯ ಕಚೇರಿ ಸೆಕೆಂದರಾಬಾದ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸೆಕೆಂದರಾಬಾದ್, ಹೈದರಾಬಾದ್ ಹಾಗೂ ನಾಂದೆಡ್ ವಿಭಾಗಗಳು ಇದರ ಆಡಳಿತ ವ್ಯಾಪ್ತಿಯಲ್ಲಿವೆ. ಈ ವಲಯವು ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವು ಭಾಗಗಳಿಗೆ ಪ್ರಮುಖ ರೈಲ್ವೆ ಸಂಪರ್ಕ ಒದಗಿಸುತ್ತಿದೆ.

 

ಪುನರ್‌ವ್ಯವಸ್ಥೆಯ ನಂತರ ಹೊಸದಾಗಿ ಸ್ಥಾಪನೆಯಾಗುವ ದಕ್ಷಿಣ ಕರಾವಳಿ ರೈಲ್ವೆ (SCoR) ವಲಯದ ಮುಖ್ಯ ಕಚೇರಿ ವಿಶಾಖಪಟ್ಟಣಂನಲ್ಲಿ ಕಾರ್ಯನಿರ್ವಹಿಸಲಿದ್ದು, ವಿಜಯವಾಡ, ಗುಂಟೂರು, ಗುಂಟಕಲ್ ಹಾಗೂ ವಿಶಾಖಪಟ್ಟಣಂ (ಹೊಸ ಮುಖ್ಯ ಕಚೇರಿ ವಿಭಾಗ) ವಿಭಾಗಗಳು ಇದರ ಅಡಿಯಲ್ಲಿ ಬರಲಿವೆ. ಇದರಿಂದ ಆಂಧ್ರಪ್ರದೇಶ ಹಾಗೂ ಕರಾವಳಿ ಪ್ರದೇಶಗಳ ರೈಲ್ವೆ ಆಡಳಿತಕ್ಕೆ ಹೊಸ ಚೈತನ್ಯ ದೊರಕಲಿದೆ.

 

ಈ ಪುನರ್‌ವ್ಯವಸ್ಥೆಯ ಭಾಗವಾಗಿ ಪ್ರಮುಖ ಮಾರ್ಗಗಳ ವಿಭಾಗೀಯ ಬದಲಾವಣೆಗಳನ್ನೂ ಕೈಗೊಳ್ಳಲಾಗುತ್ತಿದ್ದು,ಈ ಬದಲಾವಣೆಗಳಿಂದ ರೈಲ್ವೆ ಆಡಳಿತ ವ್ಯವಸ್ಥೆ ಇನ್ನಷ್ಟು ಸರಳ ಮತ್ತು ಪರಿಣಾಮಕಾರಿಯಾಗಲಿದ್ದು, ನಿರ್ವಹಣಾ ವೆಚ್ಚ ಕಡಿಮೆಯಾಗುವ ಜೊತೆಗೆ ಪ್ರಯಾಣಿಕರಿಗೆ ವೇಗವಾದ, ಗುಣಮಟ್ಟದ ಸೇವೆ ಲಭ್ಯವಾಗಲಿದೆ. ಅಲ್ಲದೆ, ಮೂಲಸೌಕರ್ಯ ಅಭಿವೃದ್ಧಿ, ಹೊಸ ರೈಲು ಸಂಚಾರ, ಸಮಯಪಾಲನೆ ಹಾಗೂ ಸುರಕ್ಷತಾ ಕ್ರಮಗಳ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದು ಡಾ. ಬಾಬು ರಾವ್ ಅವರು ತಮ್ಮ ಪ್ರಕಟಣೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

 

ರಾಯಚೂರು–ವಾಡಿ (108 ಕಿಮೀ) ಮಾರ್ಗವನ್ನು ಸೆಕೆಂದರಾಬಾದ್ ವಿಭಾಗಕ್ಕೆ ವರ್ಗಾಯಿಸಲಾಗುತ್ತದೆ.

ವಿಕಾರಾಬಾದ್–ಪರಳಿ (142 ಕಿಮೀ) ಮಾರ್ಗವೂ ಸೆಕೆಂದರಾಬಾದ್ ವಿಭಾಗದ ವ್ಯಾಪ್ತಿಗೆ ಸೇರಲಿದೆ.

ಮೋಟುಮರಿ–ಕೊಂಡಪಳ್ಳಿ (46 ಕಿಮೀ) ಮಾರ್ಗವನ್ನು ವಿಜಯವಾಡ ವಿಭಾಗಕ್ಕೆ ಒಳಪಡಿಸಲಾಗುತ್ತದೆ.

Leave a Reply

Your email address will not be published. Required fields are marked *