ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಸೈನಿಕರಂತೆ ಮುನ್ನುಗ್ಗಿದರೆ ಸಂಘದ ಚಟುವಟಿಕೆಗಳು ಯಶಸ್ವಿಯಾಗುತ್ತವೆ’ ಎಂದು ರಾಜ್ಯ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೂತನ ಜಿಲ್ಲಾಧ್ಯಕ್ಷ ಮಕ್ತುಮ್ ಕಾಮ್ದಾರ್ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಸದಸ್ಯರು ಕಾರ್ಯಪ್ರವೃತ್ತರಾದರೆ ಕೇವಲ ಆರು ತಿಂಗಳಿಂದ ಒಂದು ವರ್ಷದೊಳಗೆ ರಾಜ್ಯ ಸಂಘವನ್ನು ಮೀರಿಸುವಂತಹ ರೀತಿಯಲ್ಲಿ ಕ್ರಿಯಾಶೀಲತೆಯಿಂದ ಕೆಲಸ ಮಾಡಲು ಸಾಧ್ಯ’ ಎಂದರು.
ಸಂಘದ ಜಿಲ್ಲಾ ಉಪಾಧ್ಯಕ್ಷೆ ವಾಹಿದಾ ತಾಜ್ ಮಾತನಾಡಿ ‘ಸಂಘಟನೆಯಿಂದ ದೂರವಿರುವ ಸದಸ್ಯರನ್ನು ಒಟ್ಟುಗೂಡಿಸಿ ಸಂಘದ ಚಟುವಟಿಕೆಗಳನ್ನು ನಡೆಸಬೇಕಿದೆ. ಸಮಾಜದಲ್ಲಿ ಶಿಕ್ಷಣದ ಮಹತ್ವ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.
ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್, ಮಾಜಿ ಅಧ್ಯಕ್ಷ ಹುಸೇನ್ ಸಾಬ್ ಕಾಯಿಗಡ್ಡಿ, ಜಿಲ್ಲಾ ಕಾರ್ಯಾಧ್ಯಕ್ಷ ನಫೀಸ್ ಖಾನ್ ಪಠಾನ್, ಪ್ರಧಾನ ಕಾರ್ಯದರ್ಶಿ ಫರೀದ್ ಅಲಿ, ಖಜಾಂಚಿ ರಿಯಾಜ್ ಲಷ್ಕರೆ, ಜೂನಿಯರ್ ಎಂಜಿನಿಯರ್ ಖ್ವಾಜಾ ಹುಸೇನ್, ತಾಲ್ಲೂಕು ಅಧ್ಯಕ್ಷ ರಫೀಕ್ ಅಹ್ಮದ್ ಹೊಂಬಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

