ತಾಲ್ಲೂಕು ಕೇಂದ್ರದಿಂದ ಹತ್ತು ಕಿಮೀ ದೂರದ ದೋಟಿಹಾಳ ಗ್ರಾಮವು ಒಂದು ಕಾಲದಲ್ಲಿ ಕೈಮಗ್ಗದದ ನೇಕಾರಿಕೆಗೆ ಹೆಸರುವಾಸಿ. ಅದಕ್ಕಿಂತ ಮಿಗಿಲಾಗಿ ಭಕ್ತಿಯ ಪರಾಕಾಷ್ಠೆ ಗಡಿಯಾಚೆಗೂ ಪಸರಿಸಿದ ಆರಾಧ್ಯದೈವ ಅವಧೂತ ಶುಕಮುನಿಸ್ವಾಮಿ.ಶುಕಮುನಿಸ್ವಾಮಿ ಕೇವಲ ಪವಾಡಪುರುಷ ಅಷ್ಟೇ ಅಲ್ಲ, ಜಾತಿ-ಮತದ ಎಲ್ಲೆ ಮೀರಿ ಸಾಮಾಜಿಕ ಸಂಬಂಧದ ಬೆಸುಗೆಯನ್ನು ಗಟ್ಟಿಗೊಳಿಸಿದವರೂ ಹೌದು.ಅವಧೂತನ ಸ್ಮರಣೆಗೆ ಅವರ ಹೆಸರಿನ ಜಾತ್ಯಾತೀತ ಜಾತ್ರಾ ಮಹೋತ್ಸವ ಅನೇಕ ದಶಕಗಳಿಂದೀಚೆಗೂ ಮರುಕಳಿಸುತ್ತ ಮುನ್ನಡೆದಿದೆ.
ಪವಾಡಗಳ ಬಗ್ಗೆ ಜನರಲ್ಲಿ ನಂಬಿಕೆ ಕಡಿಮೆ ಎನ್ನುವುದರ ಮಧ್ಯೆ ಅವಧೂತನ ಪವಾಡ, ಜಾತ್ರೆ ವಿಚಾರ ಅದಕ್ಕೆ ಅಪವಾದ. ಶುಕಮುನಿಯ ಬಗ್ಗೆ ಈ ಭಾಗದ ಸಹಸ್ರ ಸಂಖ್ಯೆ ಭಕ್ತರ ಮನದಲ್ಲಿ ನಂಬಿಕೆ ಇನ್ನೂ ಗಟ್ಟಿಯಾಗಿಯೇ ಉಳಿದಿದೆ. ವರ್ಷದುದ್ದಕ್ಕೂ ತಮ್ಮಲ್ಲಿನ ಏನೇ ಮನಸ್ತಾಪಗಳನ್ನೂ ಜನ ಮರೆತು ಕೂಡಿ ಬಾಳುವುದು ಈ ಜಾತ್ರೆಯ ವಿಶೇಷ.
ಇತರೆ ಜಾತ್ರೆಗಳಿಗೆ ಹೋಲಿಸಿದರೆ ಅವಧೂತನ ಜಾತ್ರೆ ವಿಭಿನ್ನ ನೆಲೆಯಲ್ಲಿ ಗುರುತಿಸಿಕೊಳ್ಳುತ್ತದೆ. ಇಲ್ಲಿ ವೈಭವ, ಆಡಂಬರದ ಉನ್ಮಾದಕ್ಕಿಂತ ಭಕ್ತಿಯ ಪರಾಕಾಷ್ಠೆ ಎದ್ದು ಕಾಣುತ್ತದೆ.
ಮುತ್ಯಾನ ಪಲ್ಲಕ್ಕಿಗೆ ಎಲ್ಲಿಲ್ಲದ ಮಹತ್ವ: ಜಾತ್ರೆಯ ವಾರದ ಮುನ್ನ ಚಾಲನೆಗೊಳ್ಳುವ ಶುಕಮುನಿಸ್ವಾಮಿ ಪಲ್ಲಕ್ಕಿ ಉತ್ಸವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಊರ ಮುಂದಿನ ಹಳ್ಳದ ಬಳಿ ಗಂಗಾಪೂಜೆ ನೆರವೇರಿದ ನಂತರ, ಮಠದಲ್ಲಿ ಆಹೋರಾತ್ರಿ ನಿರಂತರ ಸಪ್ತಭಜನೆ ಸಮಾಪ್ತಿಗೊಳ್ಳುವುದು ಶಿವರಾತ್ರಿ ಅಮಾವಾಸ್ಯೆ ದಿನ.
ಪ್ರತಿನಿತ್ಯ ಶುಕಮುನಿಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಹೊರಡುವ ಪಲ್ಲಕ್ಕಿ ಸಂಜೆವರೆಗೂ ಎಲ್ಲಿಯೂ ನಿಲ್ಲದೆ ಪಲ್ಲಕ್ಕಿ ಹೊತ್ತವರನ್ನು ಚಿತ್ತಬಂದತ್ತ ತಿರುಗಿಸುತ್ತದೆ ಎನ್ನುವ ನಂಬಿಕೆ ಬಲವಾಗಿದೆ. ಸುತ್ತಲಿನ ಹತ್ತಾರು ಹಳ್ಳಿಗಳಿಗೆ ಪಲ್ಲಕ್ಕಿ ಆಗಮಿಸಿದಾಗ ಆಯಾ ಊರುಗಳ ಭಕ್ತರ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಊರುಗಳು ತಳಿರುತೋರಣ, ರಂಗೋಲಿಯಿಂದ ಸಿಂಗಾರಗೊಳ್ಳುತ್ತವೆ. ವಾದ್ಯಮೇಳ, ಭಜನಾ ತಂಡಗಳೊಂದಿಗೆ ಪಲ್ಲಕ್ಕಿ ತಮ್ಮ ಮನೆ ಮುಂದೆ ಬರುತ್ತಿದ್ದಂತೆ ಪೂಜೆ ಸಲ್ಲಿಸಿ ಕೃತಾರ್ಥರಾಗುತ್ತಾರೆ.
ಶುಕಮುನಿಸ್ವಾಮಿ ಜಾತ್ರೆಗೆ ಜಾತಿ ಭೇದವಿಲ್ಲ, ಎಲ್ಲ ಜಾತಿ ಸಮುದಾಯಗಳ ಜನರೂ ಕೈಜೋಡಿಸುತ್ತಾರೆ. ಎಲ್ಲರೂ ಪಲ್ಲಕ್ಕಿಗೆ ಹೆಗಲುಕೊಟ್ಟು, ದವಸಧಾನ್ಯ, ಆರ್ಥಿಕ ನೆರವಿನ ಮೂಲಕ ಭಕ್ತಿಸೇವೆ ನೆರವೇರಿಸುತ್ತ ಬಂದಿದ್ದಾರೆ.
ಶಂಕರ ಪತ್ತಾರ ಛಾಯಾಚಿತ್ರ ಕಲಾವಿದ.ಶುಕಮುನಿ ತಾತ ನಂಬಿದವರನ್ನು ಎಂದಿಗೂ ಕೈಬಿಡದೆ ಇಷ್ಟಾರ್ಥ ಈಡೇರಿಸುತ್ತ ಬಂದಿದ್ದಾರೆ. ಪಲ್ಲಕ್ಕಿ ಸಪ್ತಭಜನೆ ದಾಸೋಹ ಪರಂಪರೆ ಇಲ್ಲಿಯ ಮತ್ತೊಂದು ವಿಶೇಷದೊಡ್ಡನಗೌಡ ಪಾಟೀಲ ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕಶುಕಮುನಿ ತಾತನ ಜಾತ್ರೆಯಲ್ಲಿ ಎಲ್ಲ ಜನರ ಒಳಗೊಳ್ಳುವಿಕೆ ಇರುವುದು ಮಾದರಿಯಾಗಿದೆ. ಕರ್ನಾಟಕದಲ್ಲಷ್ಟೇ ಅಲ್ಲ ಇತರೆ ರಾಜ್ಯಗಳಲ್ಲಿಯೂ ಭಕ್ತರು ಇರುವುದು ವಿಶೇಷ ಹಸನಸಾಬ್ ದೋಟಿಹಾಳ ತುಂಗಭದ್ರಾ ಕಾಡಾ ಅಧ್ಯಕ್ಷಅವಧೂತ ಶುಕಮುನಿಸ್ವಾಮಿ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ ಜಾತ್ರೆಗೆ ವಿಶೇಷ ಮಹತ್ವವಿದೆ. ಎಲ್ಲ ಸಮುದಾಯಗಳ ಜನರೂ ಇದರಲ್ಲಿ ಪಾಲ್ಗೊಳ್ಳುವುದರಿಂದ ಜಾತ್ರೆ ಜಾತ್ಯತೀತ ಪರಂಪರೆಯನ್ನು ಪೋಷಿಸಿಕೊಂಡು ಬಂದಿದೆ
ಕಳ್ಳ ಎಂದವರೇ ಕಾಲಿಗೆ ಬಿದ್ದರು
ಶುಕಮುನಿಸ್ವಾಮಿ ಈ ಊರಿಗೆ ಬಂದಿದ್ದೇ ಒಂದು ಆಕಸ್ಮಿಕ ಪವಾಡ ಎನ್ನುತ್ತಾರೆ ಇಲ್ಲಿಯ ಭಕ್ತರು. ಗ್ರಾಮದ ದಕ್ಷಿಣ ಭಾಗದಲ್ಲಿ ಮುಳ್ಳುಕಂಟಿಯ ಮಧ್ಯೆ ಜನಸಂಚಾರ ಇಲ್ಲದ ಪುರಾತನ ದೇವಸ್ಥಾನ ಇತ್ತು. ಅದರ ಮುಂದೆ ದಿಗಂಬರನಾಗಿ ಧ್ಯಾನಸ್ಥನಾಗಿ ಕುಳಿತ ವ್ಯಕ್ತಿ ಕುರಿಗಾಹಿಗಳ ಕಣ್ಣಿಗೆ ಬೀಳುತ್ತಾನೆ. ಆ ವಿಷಯ ಊರವರಿಗೂ ತಿಳಿಯುತ್ತದೆ. ಕೇಳಿದರೆ ವ್ಯಕ್ತಿ ಮೌನವೆ ಉತ್ತರವಾಗುತ್ತದೆ. ಆಗ ಈತ ಕಳ್ಳ ಇರಬಹುದೆಂದೆ ಜನ ಮನಬಂದಂತೆ ಥಳಿಸುತ್ತಾರೆ. ಅಷ್ಟಾದರೂ ಆತನಲ್ಲಿ ಯಾವುದೇ ಬದಲಾವಣೆಗಳು ಕಾಣುವುದಿಲ್ಲ. ಬಾಹ್ಯಕ್ಕೆ ಬಿದ್ದ ಬಿದ್ದ ಪೆಟ್ಟು ಆತನ ಅಂತರಂಗ ತಲುಪಲಿಲ್ಲ. ಥಳಿತಕ್ಕೆ ವಿಚಲಿತನೂ ಆಗದ್ದನ್ನು ಕಂಡ ಹಿರಿಯರೇ ಅಚ್ಚರಿಗೊಳಗಾಗುವಂತಾಯಿತು. ಆತ ಒಬ್ಬ ಯೋಗಿ ಮಹಾತ್ಮನೇ ಇರಬೇಕು ಎಂಬ ತೀರ್ಮಾನಕ್ಕೆ ಬಂದು ಕಳ್ಳನೆಂದವರಲ್ಲಿ ಪಶ್ಚಾತಾಪವಾಗಿ ಕಾಲಿಗೆ ಬೀಳುತ್ತಾರೆ. ನಂತರ ಊರಿನ ಗುರುಗಳು ವ್ಯಕ್ತಿಗೆ ಅವಧೂತ ಶುಕಮುನಿ ಎಂದೆ ನಾಮಕರಣ ಮಾಡುತ್ತಾರೆ. ಅಂದಿನಿಂದ ದೋಟಿಹಾಳ-ಕೇಸೂರು ಗ್ರಾಮಗಳು ಅವಧೂತನ ಆವಾಸಸ್ಥಾನವಾಗುತ್ತವೆ ಎನ್ನುತ್ತಾರೆ. ಒಣ ಬರ ಉಂಟಾದಾರ ಮಳೆ ತರಿಸಿದ್ದು ಪ್ರವಾಹದ ಮಧ್ಯೆ ಹೆಸರೂರು ಗ್ರಾಮಕ್ಕೆ ಹೋಗಿ ಹಾಗೇ ಮರಳಿ ಬಂದಿದ್ದರು. ಕೇಸೂರು ದೋಟಿಹಾಳ ಗ್ರಾಮಗಳಿಗೆ ಕಾಲರಾ ಬರದಂತೆ ಸುತ್ತಲೂ ಮುಳ್ಳುಬೇಲಿ ಹಾಕಿ ತಡೆದಿದ್ದರು. ಹೀಗೆ ತಮ್ಮ ಪಾಲಿನ ಆರಾಧ್ಯದೈವ ಎಂದೆ ಭಾವಿಸುವ ಈ ಭಾಗದ ಜನ ಶುಕಮುನಿ ತಾತನ ಪವಾಡಗಳ ಬಗ್ಗೆ ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ. ಅನೇಕ ಜನ ತಮ್ಮ ಮಕ್ಕಳಿಗೆ ಶುಕಮುನಿ ಎಂದೆ ಹೆಸರಿಡುತ್ತಿರುವುದು ಜನ ತಾತನ ಮೇಲಿರಿಸಿರುವ ನಂಬಿಕೆ ಪ್ರತೀಕ ಎನ್ನುತ್ತಾರೆ ಹಿರಿಯರು. ಮೂಲಗಳ ಪ್ರಕಾರ 1938ರಲ್ಲಿ ಅವಧೂತ ತಾತ ದೋಟಿಹಾಳದಲ್ಲಿ ಶರೀರ ತ್ಯಾಗ ಮಾಡುತ್ತಾರೆ. ಅಂದಿನಿಂದ ಆ ದಿನ ಜಾತ್ರೆ ನೆರವೇರುತ್ತ ಬಂದಿದೆ. ಅವಧೂತ ದೈಹಿಕವಾಗಿ ಅದೃಶ್ಯರಾಗಿದ್ದರೂ ಭಕ್ತರ ಮನದಲ್ಲಿ ಇಂದಿಗೂ ಸದೃಶ್ಯರಾಗಿಯೇ ಇದ್ದು ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸುತ್ತಿದ್ದಾರೆ. ತಾತನನ್ನು ನಂಬಿ ಕೆಟ್ಟವರು ಈ ಭಾಗದಲ್ಲಿಲ್ಲ ಎನ್ನಲಾಗುತ್ತಿದೆ.

