ರಾಜ್ಯದ ಪ್ರತಿಯೊಂದು ಮನೆಯಲ್ಲೂ ನೆಮ್ಮದಿ ವಾತಾವರಣ ನಿರ್ಮಾಣವಾಗಿದ್ದರೆ ಅದು ಗ್ಯಾರಂಟಿ ಯೋಜನೆಯಿಂದ ಮಾತ್ರ ಎಂದು” ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.ಕೊಪ್ಪಳ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಕೊಪ್ಪಳ ಜಿಲ್ಲಾ ಗ್ಯಾರಂಟಿ ಕಾರ್ಯಾಗಾರ ಉತ್ಸವವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಯನ್ನು ಬಿಜೆಪಿಯವರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಯೋಜನೆ ಹೀಗೆ ಮುಂದುವರೆದರೆ ರಾಜ್ಯದಲ್ಲಿ ಅವರಿಗೆ ಭವಿಷ್ಯವಿಲ್ಲ ಎಂದು ಗೊತ್ತು. ಹೀಗಾಗಿ ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ” ಎಂದರು.
“ತಾವು ಪಡೆಯುತ್ತಿರುವ 5 ಗ್ಯಾರಂಟಿ ಯೋಜನೆಗಳ ಬಗ್ಗೆ ನಿಮ್ಮ ಮನೆ ಬಾಗಿಲಿಗೆ ಬರುವ ಬಿಜೆಪಿಗರಿಗೆ, ನೀವು ಮೂರೂವರೆ ವರ್ಷ ಅಧಿಕಾರದಲ್ಲಿದ್ದೀರಿ ಯಾವ ಯೋಜನೆಯನ್ನು ಕೊಟ್ಟಿದ್ದೀರಾ? ಎಂದು ಪ್ರಶ್ನೆ ಮಾಡಬೇಕು” ಎಂದು ಸಚಿವರು ಕರೆ ನೀಡಿದರು.
“ನಮಗೆ ರಾಜ್ಯದ ಹೆಣ್ಣು ಮಕ್ಕಳ ಮೇಲೆ ನಂಬಿಕೆ ಮತ್ತು ವಿಶ್ವಾಸ ಹೆಚ್ಚಿದೆ. ನಾವು ಕಾಂಗ್ರೆಸ್‌ಗೆ ಮತ ನೀಡಿದವರಿಗೆ ಮಾತ್ರ ಗ್ಯಾರಂಟಿ ಯೋಜನೆ ಕೊಟ್ಟಿದ್ದೆವೆಯೇ?. ಬಿಜೆಪಿಗೆ ಮತ ಹಾಕಿದವರಿಗೂ ಗ್ಯಾರಂಟಿ ಯೋಜನೆ ತಲುಪಿದೆಯಲ್ಲ. ಈ ಬಗ್ಗೆ ನೀವು ಕೂಡ ನಿಮ್ಮ ನೆರೆ ಹೊರೆಯವರಿಗೆ ಜಾಗೃತಿ ಮೂಡಿಸಬೇಕು” ಎಂದು ಸಚಿವರು ತಿಳಿಸಿದರು.
“ಬಿಜೆಪಿಗರು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಬ್ಯಾಂಕ್‌ನಲ್ಲಿ ಶೂನ್ಯ ಖಾತೆ ತೆಗೆಯಿರಿ, ಪ್ರತಿ ಮಹಿಳೆಯರ ಖಾತೆಗೆ ತಲಾ 15 ಲಕ್ಷ ಹಣ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು. ಮಹಿಳೆಯರು ಮುಗಿಬಿದ್ದು, ಖಾತೆ ತೆರೆದರು. ಆದರೆ ಕೇಂದ್ರ ಸರ್ಕಾರದಿಂದ ಮಹಿಳೆಯರ ಖಾತೆಗೆ ಹಣ ಬರಲಿಲ್ಲ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಹಿಳೆಯರ ಖಾತೆಗೆ ಹಣ ಹಾಕುವ ಕೆಲಸ ಮಾಡುತ್ತಿದೆ” ಎಂದರು.
“ಗ್ಯಾರಂಟಿ ಯೋಜನೆಯಿಂದ ಮಹಿಳೆಯರ ಜೀವನ ಗುಣಮಟ್ಟ ಸುಧಾರಣೆ ಮಾಡಲಾಗಿದೆ. ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಗ್ಯಾರಂಟಿ ಯೋಜನೆಗೆ ಕುತ್ತು ಬರಲಿದೆ. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ನಿಮ್ಮ ಖಾತೆಗೆ ಹಣ ಬರುವುದು ಮುಂದುವರೆಯಲಿದೆ” ಎಂದು ಸಚಿವರು ಭರವಸೆ ನೀಡಿದರು.
“ಕೇಂದ್ರ ಸರ್ಕಾರದ್ದು ಎಲ್ಲವೂ ಹಣ ವ್ಯಯಿಸದ ಯೋಜನೆಗಳಾಗಿವೆ. ಸ್ವಚ್ಛ ಭಾರತ ಯೋಜನೆ, ಪೊರಕೆಯೂ ನಮ್ಮದೆ, ಕಸವೂ ನಮ್ಮದೆ, ಕಸ ಬಳಿಯುವವರು ಕೂಡ ನಾವೇ. ಯೋಜನೆ ಮಾತ್ರ ಕೇಂದ್ರದ್ದು” ಎಂದು ಟೀಕಿಸಿದರು.
“ಬಿಜೆಪಿಯವರಿಗೆ ಬಡವರು ನೆಮ್ಮದಿಯಾಗಿ ಬದುಕುವುದು ಇಷ್ಟವಿಲ್ಲ. ಹೀಗಾಗಿ ಯುಪಿಎ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯ ಯೋಜನೆಯ ಹೆಸರು ಬದಲಾಯಿಸಿ, ಕಾಯ್ದೆಗೆ ತಿದ್ದುಪಡಿ ತಂದಿದ್ದಾರೆ. ಅವರು ಯೋಜನೆಗಳನ್ನು ನೀಡುವುದು ಕೇವಲ ಉಳ್ಳವರಿಗೆ ಮಾತ್ರ. ಅವರ ಕಣ್ಣಿಗೆ ಕಾಣುವುದು ಕೇವಲ ಅಂಬಾನಿ, ಅದಾನಿ ಮಾತ್ರ” ಎಂದು ಸಚಿವರು ಆರೋಪಿಸಿದರು.

