ಮಾನ್ವಿ : ಗ್ರಾಮ ಪಂಚಾಯತಿ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸದೆ ಮುಂದೆ ತಳ್ಳುತ್ತಿರುವ ಪರಿಸ್ಥಿತಿಯಿಂದ, 25.11.2025ರಿಂದ ತಾಲ್ಲೂಕು ಪಂಚಾಯತ್ ಕಾರ್ಯಾಲಯ ಮಾನ್ವಿ ಎದುರು ಗ್ರಾಮ ಪಂಚಾಯತಿ ನೌಕರರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ವೇತನ, ನೇಮಕ, ಜೀವವಿಮೆ ಸೇರಿದಂತೆ ಮೂಲಭೂತ ಸೇವಾ ಹಕ್ಕುಗಳಿಗೆ ಸಂಬಂಧಿಸಿದ ಬೇಡಿಕೆಗಳು ಇನ್ನೂ ಜಾರಿಯಾಗದಿರುವುದನ್ನು ನೌಕರರು ಖಂಡಿಸಿದರು.
“ನಮ್ಮ ಬೇಡಿಕೆಗಳನ್ನು 11.11.2025ರಂದು ಮನವಿ ಮೂಲಕ ಸಲ್ಲಿಸಿದ್ದರೂ 20.11.2025ರೊಳಗೆ ಯಾವುದೇ ಕ್ರಮವಾಗಲಿಲ್ಲ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಿದ್ದರೂ ಸ್ಪಷ್ಟ ಪ್ರಗತಿ ಶೂನ್ಯ. ನೌಕರರ ಬದುಕಿನ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿರುವುದು ವಿಷಾದನೀಯ,” ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಹೆಚ್. ಶರ್ಫುದ್ದೀನ್ ಪೋತ್ನಾಳ್ ಧರಣಿ ಸ್ಥಳದಲ್ಲಿ ಮಾತನಾಡಿದರು.
ಹಾಗೂ, “ಹಲವಾರು ತಿಂಗಳಿಂದ ಬಾಕಿ ಉಳಿದ ವೇತನ, ಮರಣೋತ್ತರ ನೇಮಕ ಮತ್ತು ನಿವೃತ್ತಿ ಉಪಧನ — ಇವೆಲ್ಲವು ನೌಕರರ ಹಕ್ಕುಗಳು. ಸರ್ಕಾರದ ಆದೇಶ ಜಾರಿ ಆಗದೇ ಇರುವುದೇ ಈ ಹೋರಾಟಕ್ಕೆ ಕಾರಣ. ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿ ಮುಂದುವರಿಯುತ್ತದೆ,” ಎಂದು ಸಂಘದ ಅಧ್ಯಕ್ಷ ಅಂಬಣ್ಣ ನಾಯಕ ಬ್ಯಾಗವಾಟ ಹೇಳಿದರು.
ನೌಕರರು ಇಂದಿನಿಂದ 8 ಬೇಡಿಕೆಗಳನ್ನು ಈಡೇರಿಸುವವರೆಗೆ ಧರಣಿ ಮುಂದುವರಿಸುವುದಾಗಿ ಘೋಷಿಸಿದರು:
1. 15ನೇ ಹಣಕಾಸು ಅನುದಾನದಿಂದಲೇ ವೇತನ ಪಾವತಿ.
2. ಪ್ರತೀ ತಿಂಗಳ 5ರೊಳಗೆ ವೇತನ ಪಾವತಿಸಬೇಕು.
3. ಸೇವಾ ಅವಧಿಯಲ್ಲಿ ಮರಣ ಹೊಂದಿದ ನೌಕರರ ಕುಟುಂಬಕ್ಕೆ ನಿಯಮಾನುಸಾರ ನೇಮಕ.
4. ಸಿಬ್ಬಂದಿಗಳಿಗೆ ಜೀವವಿಮೆ ಸೌಲಭ್ಯ.
5. ನಿವೃತ್ತ ನೌಕರರಿಗೆ ಉಪಧನ.
6. ಬಾಕಿ ಉಳಿದಿರುವ ಹಲವು ತಿಂಗಳ ವೇತನವನ್ನು ತಕ್ಷಣ ಪಾವತಿಸಬೇಕು.
7. ಪ್ರತಿ ನಿತ್ಯ ಧ್ವಜಾರೋಹಣ ಮಾಡುತ್ತಿರುವ ಸಿಬ್ಬಂದಿಗೆ ಪೂರ್ಣ ವೇತನ.
8. ಸಿಬ್ಬಂದಿಗಳ ಮೇಲಿನ ದೂರುಗಳಿಗೆ ಕಾನೂನಾತ್ಮಕ ವಿಚಾರಣೆ — ವೇತನ ತಡೆದ ಕ್ರಮ ನಿಲ್ಲಿಸಲು ಅಭಿವೃದ್ಧಿ ಅಧಿಕಾರಿಗಳ ಮೇಲೆ ಕ್ರಮ.
ಹೋರಾಟದಲ್ಲಿ ನೌಕರರು, ಸಂಘದ ಸದಸ್ಯರು ಹಾಗೂ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ಸಿಬ್ಬಂದಿಗಳು ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಮಹಮ್ಮದ್ ನೀರಮಾನವಿ, ಪ್ರಧಾನ ಕಾರ್ಯದರ್ಶಿ ಸುಭಾನ್ ಚಿಕ್ಕಕೊಟ್ನೆಕಲ್, ಚಂದ್ರಶೇಖರ ಕಪಗಲ್, ಶಿವರಾಜಯ್ಯ ತೋರಣದಿನ್ನಿ, ವೆಂಕೋಬ ನಾಯಕ ಮದ್ಲಾಪೂರು, ಯೇಸುರಾಜು ಕುರ್ಡಿ, ವೆಂಕಟಗಿರಿ ಉಟಕನೂರು, ವಿಜಯ ಕುಮಾರ ಅರೋಲಿ, ಸಿದ್ದಲಿಂಗಯ್ಯ ಸ್ವಾಮಿ, ಶೇಖರಪ್ಪ ತಡಕಲ್, ಹನುಮಂತ ರೆಡ್ಡಿ ಸಾದಾಪೂರ, ಅಮರೇಶ ಜಾನೇಕಲ್, ಹುಚ್ಚಪ್ಪ ಪೊತ್ನಾಳ್ ಸೇರಿದಂತೆ ತಾಲೂಕು ಘಟಕದ ಸದಸ್ಯರು ಹಾಗೂ ವಿವಿಧ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

