ರಾಯಚೂರು ಫೆಬ್ರವರಿ 17 (ಕರ್ನಾಟಕ ವಾರ್ತೆ): ಮಹಿಳೆಯರ ಮತ್ತು ಮಕ್ಕಳನ್ನು ಸಾಗಣೆ ಮಾಡುವ ಅನೈತಿಕ ಚಟುವಟಿಕೆಯನ್ನು ತೊಲಗಿಸುವ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕ. ಆಗ ಮಾತ್ರ ಅಮಾನವೀಯ ಕೃತ್ಯ ನಿಯಂತ್ರಿಸಲು ಸಾಧ್ಯ ಎಂದು ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ನ್ಯಾ.ಹೆಚ್.ಎ.ಸಾತ್ವಿಕ್ ಅವರು ಹೇಳಿದರು.
ಫೆ.17ರ ಮಂಗಳವಾರ ದಂದು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೊದಲನೆ ಮಹಡಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ರಾಯಚೂರು ಇವರ ಸಂಯುಕ್ತಾಶ್ರಯದಲ್ಲಿ ವಿವಿಧ ಭಾಗೀಧಾರ ಇಲಾಖೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಕುರಿತು ಹಾಗೂ ಐಟಿಪಿಎ-1956ರ
ಕಾಯ್ದೆಯ ಬಗ್ಗೆ ಜಿಲ್ಲಾ ಮಟ್ಟದಲ್ಲಿ ಒಂದು ದಿನದ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾನವ ಕಳ್ಳ ಸಾಗಾಣೆಯಂತಹ ದುಷ್ಕೃತ್ಯ ಸಮಾಜಕ್ಕೆ ಮಾರಕವಾಗಿದೆ. ಜತೆಗೆ ಮೂಲ ಹಕ್ಕುಗಳ ಉಲ್ಲಂಘನೆ ಕುರಿತು ಅನೇಕ ದೂರುಗಳು ದಾಖಲಾಗುತ್ತಿವೆ. ಆದ್ದರಿಂದ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಜವಾಬ್ದಾರಿ ಅರಿತು ಸಾರ್ವಜನಿಕರು ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನವೀನ್ ಕುಮಾರ್ ಅವರು ಮಾತನಾಡಿ, ಸಮಾಜದಲ್ಲಿ ನಡೆಯುವಂಥ ಕಾನೂನು ಬಾಹಿರ ಘಟನೆಗಳಿಗೆ ಮೌನವಹಿಸಿದರೆ, ಪರೋಕ್ಷವಾಗಿ ಅಪರಾಧಿಗಳಾದಂತೆ. ಆದ್ದರಿಂದ ಕಣ್ಣ ಮುಂದೆ ದುಷ್ಕೃತ್ಯಗಳು ನಡೆದಾಗ ಅದನ್ನು ತಪ್ಪಿಸಬೇಕಾದ್ದು, ಪ್ರತಿಯೊಬ್ಬರ ಕರ್ತವ್ಯವಾಗಿದೆ. ಮಹಿಳೆಯರ ಅಭಿವೃದ್ಧಿಗಾಗಿ ಸರ್ಕಾರ ಜಾರಿ ತಂದಿರುವ ಯೋಜನೆಗಳ ಸದುಪಯೋಗವಾಗುವಂತೆ ಮಾಡಿ, ಸಮಾಜದ ಬದಲಾವಣೆಗೆ ಶ್ರಮಿಸಬೇಕು ಎಂದರು.
ಪ್ರತಿಜ್ಞಾವಿಧಿ ಬೋಧನೆ: ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಮಾನವ ಕಳ್ಳ ಸಾಗಾಣಿಕೆಯಿಂದ ವಿಮುಕ್ತಗೊಳಿಸಲು, ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ಹಾಗೂ ಸಾಗಾಣಿಕೆಗೆ ಒಳಪಟ್ಟವರಿಗೆ ಸೂಕ್ತ ನ್ಯಾಯ ಒದಗಿಸಲು ನನ್ನ ಸೇವೆಯನ್ನು ಮುಡುಪಾಗಿಡುತ್ತೇನೆ, ಸಂವಿಧಾನದಲ್ಲಿ ನೀಡಿರುವ ಸಮಾನತೆಯನ್ನು ಸಾಧಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಜೆ.ಕುಮಾರಸ್ವಾಮಿ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿಂಧೂ, ಕಾರ್ಮಿಕ ಇಲಾಖೆ ಅಧಿಕಾರಿ ಆರತಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅಮರೇಶ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಿವಮಾನಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶರಣಮ್ಮ ಕಾರನೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಕುಮಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಮೈಬೂಬ್ ಸಾಬ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ತಜ್ಞರಾದ ಗಿರಿಜವ್ವ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *