ರಾಯಚೂರು ಫೆಬ್ರವರಿ 16 (ಕರ್ನಾಟಕ ವಾರ್ತೆ): ಪ್ರತಿಯೊಬ್ಬ ಭಾರತೀಯರು ತಮ್ಮ ಮೂಲಭೂತ ಹಕ್ಕುಗಳನ್ನು ಪಡೆಯುವುದು ಸಂವಿಧಾನದ ಆಶಯವಾಗಿದೆ. ಕಾನೂನು ಸೇವಾ ಪ್ರಾಧಿಕಾರ ಸೇರಿದಂತೆ ಸರ್ಕಾರದ ಸವಲತ್ತು ಮುಟ್ಟಿಸುವ ಕೆಲಸವನ್ನು ಅರೆಕಾಲಿಕ ಸೇವಾ ಸ್ವಯಂ ಸೇವಕರು ಮಾಡಬೇಕೆಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೌರವಾನ್ವಿತ ಮಹಾವರಕರ್ ಗುಲ್ಜರ್ ಲಾಲ್ ಅವರು ಹೇಳಿದರು.
ಫೆ.16ರ ಸೋಮವಾರ ದಂದು ನಗರದ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಔಟ್ ಲಾಡ್ ಇಂಡಿಯಾ ಸಂಸ್ಥೆ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ 4 ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಅನುಭವಿಸುತ್ತಿರುವ ಸ್ವಾತಂತ್ರö್ಯವು ದೇಶದ ಸಂವಿಧಾನ ನೀಡಿರುವ ಅಧ್ಬುತ ಕೊಡುಗೆಯಾಗಿದೆ. ಇದರ ಜೊತೆಗೆ ವ್ಯಕ್ತಿಗೆ ಸಿಗಬೇಕಾದ ಸೌಲಭ್ಯ, ಮಾಹಿತಿ, ಸೇವೆಗಳನ್ನು ನೀಡಲು ನಿಯಮಿತ ಜವಾಬ್ದಾರಿ ಇರುತ್ತದೆ. ಇದನ್ನು ಒದಗಿಸಲು ಹಲವಾರು ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ಸಹ ಕೆಲವರಿಗೆ ಕಾನೂನು ಅರಿವಿನ ಕೊರತೆಯಿಂದ ಸೌಲಭ್ಯ, ಸೇವೆ ಪಡೆಯಲು ಆಗುತ್ತಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸಿಗಬೇಕಾದ ಸಾಮಾನ್ಯ ಕಾನೂನಿನ ಜ್ಞಾನವನ್ನು ಒದಗಿಸಿ ಆತನನ್ನು ತೊಂದರೆಗಳಿಂದ ಪಾರು ಮಾಡುವ ಗುರುತರ ಜವಾಬ್ದಾರಿಯನ್ನು ಸ್ವಯಂ ಸೇವಕರು ತೆಗೆದುಕೊಳ್ಳಬೇಕು. ಸಮಾಜ ಸೇವೆ ಮಾಡುವ ಮನಸ್ಥಿತಿಯುಳ್ಳವರು ಮುಂದೆ ಬಂದಿರುವುದು ಶ್ಲಾಘನೀಯವಾಗಿದೆ ಎಂದರು.
ಇದಕ್ಕೂ ಮೊದಲು ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ನ್ಯಾ.ಹೆಚ್.ಎ.ಸಾತ್ವಿಕ್ ಅವರು ಮಾತನಾಡಿ, ಸಾರ್ವಜನಿಕರಿಗೆ ಕಾನೂನುಗಳ ಸಲಹೆಗಳನ್ನು ಉಚಿತವಾಗಿ ನೀಡುವುದು ಈ ತರಬೇತಿಯ ಉದ್ದೇಶವಾಗಿದೆ. ಕೆಲವೊಂದು ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಸಹ ತೆಗೆದುಕೊಳ್ಳಲು ಸಾರ್ವಜನಿಕರಿಗೆ ಮಾಹಿತಿ ಗೊತ್ತಿರುವುದಿಲ್ಲ. ಅಂತವರಿಗೆ ಸರಿಯಾದ ಮಾಹಿತಿ ಸಲಹೆಗಳನ್ನು ಅರೆಕಾಲಿಕ ಸೇವಾ ಸ್ವಯಂ ಸೇವಕರು ನೀಡಿ, ಸರ್ಕಾರದ ವಿವಿಧ ಸೌಲಭ್ಯವನ್ನು ಒದಗಿಸಬೇಕೆಂದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಬೇಕಾಗುವ ಅಗತ್ಯ ನೆರವುವನ್ನು ಆರೋಗ್ಯ ಇಲಾಖೆಯಿಂದ ನೀಡುವುದರ ಜೊತೆಗೆ ಪ್ರಾಥಮಿಕ ಆರೋಗ್ಯ ದಿಂದ ಜಿಲ್ಲಾ ಮಟ್ಟದ ವೈದ್ಯರಿಗೆ ಕಾನೂನು ಅರಿವು ನೀಡಲು ಶ್ರಮಿಸಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ಗೌರವಾನ್ವಿತ ಶ್ರೀಕಾಂತ್ ಎಸ್.ವಿ., ಬೆಂಗಳೂರಿನ ಔಟ್ ಲಾಡ್ ಇಂಡಿಯಾ ಸಂಸ್ಥೆಯ ವೆಂಕಟೇಶ ಎಚ್., ಜೋಮಿ ಜಾಯ್ ಸೇರಿದಂತೆ ಇತರರು ಇದ್ದರು. ವಕೀಲರಾದ ಮಾಲತಿ ಅವರು ನಿರೂಪಣೆ, ಸ್ವಾಗವನ್ನು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪನವರು, ವಂದನಾರ್ಪಣೆಯನ್ನು ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ ನಿರ್ವಹಣೆ ಮಾಡಿದರು.


