ರಾಯಚೂರು ಫೆಬ್ರವರಿ 16 (ಕರ್ನಾಟಕ ವಾರ್ತೆ): ಆರ್ಥಿಕ ತೊಂದರೆಯುಳ್ಳ ನಗರದ ಪ್ರದೇಶದ ಜನತೆಗೂ ಸಹ ಶೀಘ್ರದಲ್ಲಿಯೇ ಗೃಹ ಆರೋಗ್ಯ ಯೋಜನೆಯನ್ನು ವಿಸ್ತರಿಸಿ ಸೌಲಭ್ಯ ಒದಗಿಸುವುದಕ್ಕೆ ಅಗತ್ಯ ಸಿದ್ಧತೆ ಕೈಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಹೇಳಿದರು.
ಫೆ.16ರ ಸೋಮವಾರ ನಗರದ ಜಿಲ್ಲಾ ಆರೋಗ್ಯ ತರಬೇತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ವಿಭಾಗದಿಂದ ವಿವಿಧ ವೈದ್ಯಾಧಿಕಾರಿಗಳಿಗೆ, ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಳ್ಳಲಾಗಿದ್ದ ಗೃಹ ಆರೋಗ್ಯ ಯೊಜನೆಯ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕ ಸರಕಾರವು ಆರೋಗ್ಯ ಸೇವೆ-ಮನೆ ಬಾಗಿಲಿಗೆ ಎಂಬ ಧ್ಯೇಯದಡಿ ಜೀವನ ಶೈಲಿಯ ಖಾಯಿಲೆಗಳಾದ ರಕ್ತದೊತ್ತಡ, ಸಕ್ಕರೆ ಖಾಯಿಲೆ ಜೊತೆ ಜೊತೆಗೆ ಕ್ಯಾನ್ಸರ್ ಪತ್ತೆ ಹಾಗೂ ಚಿಕಿತ್ಸೆ ಸೇರಿದಂತೆ 14 ವಿವಿಧ ಆರೋಗ್ಯ ಸೇವೆಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸಿದಂತೆ ನಗರದ ಪ್ರದೇಶದ ಅರ್ಥಿಕ ತೊಂದರೆಯುಳ್ಳ ಜನತೆಗೂ ಸಹ ಶೀಘ್ರದಲ್ಲಿಯೇ ಒದಗಿಸಲು ನಿರ್ಧರಿಸಲಾಗಿದ್ದು, ಈ ದಿಶೆಯಲ್ಲಿ ಎಲ್ಲರೂ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ತರಬೇತಿಯ ಮಹತ್ವ ಪಡೆದುಕೊಳ್ಳಬೇಕು ಎಂದರು.
ಆರ್ಥಿಕ ದುರ್ಬಲ ವರ್ಗದದವರಿಗೆ ಮನೆ ಮಟ್ಟದಲ್ಲೇ ಆರೋಗ್ಯದ ಸೌಲಭ್ಯ ದೊರಕಿಸಿ ಅವರ ಕುಟುಂಬಕ್ಕಾಗುವ ಆರ್ಥಿಕ ಹೊರೆಯನ್ನು ದೂರಮಾಡಲು ಗೃಹ ಆರೋಗ್ಯದಡಿ ಅಧಿಕ ರಕ್ತದೊತ್ತಡ, ಮಧುಮೇಹ, ಮೂತ್ರ ಪಿಂಡದ ಖಾಯಿಲೆ, ಲಿವರ ಸಮಸ್ಯೆ, ಕ್ಯಾನ್ಸರ್, ತಾಯಿ ಮಗುವಿನ ಆರೋಗ್ಯ, ರಕ್ತ ಹೀನತೆ, ಮಾನಸಿಕ ಕಾಯಿಲೆ, ಕ್ಷಯರೋಗ ಲಕ್ಷಣಗಳು ಮುಂತಾದವುಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಚಿಕಿತ್ಸೆಯನ್ನು ಕೊಡಿಸುವ ಮಹತ್ವಾಕಾಂಕ್ಷಿ ಉದ್ದೇಶವನ್ನು ತರಬೇತಿಯಲ್ಲಿ ಅರ್ಥೈಸಿಕೊಂಡು ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ನಂದೀತಾ ಎಮ್.ಎನ್., ಡಿಪಿಡಿಓ ಡಾ.ಚಂದ್ರಶೇಖರಯ್ಯ ಸ್ವಾಮಿ, ತಜ್ಞ ವೈದ್ಯರಾದ ಡಾ.ಶ್ರೀನಿವಾಸ್, ಡಾ.ವಂದನಾ, ಡಾ.ಮನೋಹರ ಪತ್ತಾರ, ತಾಲೂಕಾ ಆರೋಗ್ಯಾಧಿಕಾರಿ ಡಾ.ಅಮೃತ್ ಹುಕ್ಕೆರಿ, ಡಿಹೆಚ್‌ಇಓ ಈಶ್ವರ ಹೆಚ್.ದಾಸಪ್ಪನವರ, ಡಿಡಿಎಮ್ ಲೋಕೇಶ್, ಡಿವೈಹೆಚ್‌ಇಓ ಬಸಯ್ಯ, ಜಿಲ್ಲಾ ಆಶಾ ಮೇಲ್ವಿಚಾರಕಿ ಶಾರೂನ್, ಬಿಹೆಚ್‌ಇಓ ಸರೋಜಾ ಕೆ, ಹಿರಿಯ ಹೆಚ್‌ಐಓ ಸುರೇಶ್, ಆಶಾ ಮೇಲ್ವಿಚಾರಕಿ ಮರಿಯಾಳಮ್ಮ ಸೇರಿದಂತೆ ಇತರರು ಇದ್ದರು.



