ರಾಯಚೂರು ಫೆಬ್ರವರಿ 16 (ಕರ್ನಾಟಕ ವಾರ್ತೆ): ರಾಯಚೂರು ರಿಪೋರ್ಟರ್ಸ್ ಗಿಲ್ಡ್ ರೂಪಿಸಿರುವ ಪತ್ರಕರ್ತರ ತುರ್ತು ನಿಧಿಯಿಂದ ಹಿರಿಯ ಪತ್ರಕರ್ತ ದಿ.ಸೈಯದ್ ಅಶ್ರಫ್ ಅವರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಚೆಕ್ ವಿತರಣೆ ಕಾರ್ಯಕ್ರಮ ಫೆ.16ರಂದು ನಡೆಯಿತು.
ರಾಯಚೂರು ಪ್ರವಾಸದಲ್ಲಿದ್ದ, ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರು ನಗರದ ಪತ್ರಿಕಾ ಭವನಕ್ಕೆ ಆಗಮಿಸಿ ಸೈಯದ್ ಅಶ್ರಫ್ ಅವರ ಕುಟುಂಬದವರಿಗೆ ಪತ್ರಕರ್ತರ ಸಮಕ್ಷಮದಲ್ಲಿ ಚೆಕ್ ವಿತರಿಸಿದರು.
ಈ ವೇಳೆ ಸಲೀಂ ಅಹ್ಮದ್ ಅವರು ಮಾತನಾಡಿ, ಪತ್ರಕರ್ತರು ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದು ಪತ್ರಿಕಾವೃತ್ತಿಯ ಘನತೆ ಬಗ್ಗೆ ವಿವರಿಸಿದರು.
ರಾಯಚೂರು ರಿಪೋರ್ಟರ್ಸ್ ಗಿಲ್ಡ್ ತುರ್ತು ನಿಧಿಗೆ ಅನುದಾನ ಒದಗಿಸುವ ಕುರಿತು ಮುಖ್ಯಮಂತ್ರಿ ಹಾಗೂ ಮಾಧ್ಯಮ ಸಲಹೆಗಾರರೊಂದಿಗೆ ಚರ್ಚೆ ನಡೆಸಲಾಗುವುದು. ಗಿಲ್ಡನ ಬೆಳ್ಳಿ ಮಹೋತ್ಸವ ಕಾರ್ಯಕ್ರಮಕ್ಕೂ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು. ಪತ್ರಕರ್ತರ ಹಿತಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದರು.
ಇದಕ್ಕು ಮೊದಲು ಗಿಲ್ಡನ ಅಧ್ಯಕ್ಷ ವಿಜಯ ಜಾಗಟಗಲ್ ಅವರು ಮಾತನಾಡಿ, ಸೈಯದ್ ಅಶ್ರಫ್ ಅವರ ಪತ್ರಿಕಾ ಸೇವೆಯ ಬಗ್ಗೆ ವಿವರಿಸಿದರು.
ನಗರದಲ್ಲಿ 200ಕ್ಕು ಹೆಚ್ಚು ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದು, ಅವರಿಗಾಗಿ ತುರ್ತು ನಿಧಿ, ಆರೋಗ್ಯ ವಿಮೆ ಸೇರಿದಂತೆ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ, ರಾಜ್ಯ ನೀತಿ ಆಯೋಗದ ಸದಸ್ಯರಾದ ಡಾ.ರಝಾಕ್ ಉಸ್ತಾದ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಆರ್.ಗುರುನಾಥ, ರಾಜ್ಯ ಸಮಿತಿ ಸದಸ್ಯ ಬಸವರಾಜ ನಾಗಡದಿನ್ನಿ, ಮುಖಂಡರಾದ ಬಷೀರುದ್ದಿನ್, ಮಹಮ್ಮದ್ ಶಾಲಂ, ಅಸ್ಲಂ ಪಾಷಾ, ರುದ್ರಪ್ಪ ಅಂಗಡಿ ಸೇರಿದಂತೆ ಜಿಲ್ಲೆಯ ಹಿರಿಯ, ಕಿರಿಯ ಪತ್ರಕರ್ತರು ಇದ್ದರು.


