ತಾಳಿಕೋಟಿ: ಸಮಾಜದಲ್ಲಿ ಆರ್ಥಿಕ ರಾಜಕೀಯ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸಣ್ಣ ಸಮಾಜಗಳನ್ನು ಮುಖ್ಯವಾಹಿನಿಗೆ ತರುವ ಕಾರ್ಯವಾಗಬೇಕಾಗಿದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಅಪ್ಪಾಜಿ ನಾಡಗೌಡ ಹೇಳಿದರು. ರವಿವಾರ ಪಟ್ಟಣದ ವಿದ್ಯಾಭಾರತಿ ಪ್ರೌಢಶಾಲೆ ಆವರಣದಲ್ಲಿ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ತಾಲೂಕ ಘಟಕದ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಅನಾವರಣ, ನೂತನ
ಸಭಾಭವನ ಉದ್ಘಾಟನೆ ಹಾಗೂ ಅಂಬಿಗರ ಚೌಡಯ್ಯ ಅನುಭವ ಮಂಟಪ ಶಂಕು ಸ್ಥಾಪನೆ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯನ್ನು ಉದ್ಘಾಟಿಸಿ ಅವರುಮಾತನಾಡಿದರು. ಮುದ್ದೇಬಿಹಾಳ ಪಟ್ಟಣದಲ್ಲಿಯೂ ಈ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಹಾಗೂ ಅನುದಾನ ಕೊಡಲಿದ್ದೇನೆ. ಅವರ ಬೇಡಿಕೆಯಂತೆ ಸಮಾಜವನ್ನು ಎಸ್ ಟಿ ವರ್ಗಕ್ಕೆ ಸೇರಿಸಲು ಕೇಂದ್ರಕ್ಕೆ ಒತ್ತಾಯಿಸಲು ಬಜೆಟ್ ಅಧಿವೇಶನದಲ್ಲಿ ಮಾತನಾಡುತ್ತೇನೆ. ಸದಾ ನಾನು ನಿಮ್ಮ ಜೊತೆಯಲ್ಲೇ ಇದ್ದು ನಿಮ್ಮ ಸಮಾಜದ ಏಳಿಗೆಗಾಗಿ ಶಕ್ತಿಮೀರಿ ಕೆಲಸ ಮಾಡುತ್ತೇನೆ. ಯಾವ ಕಾರಣಕ್ಕೂ ಸಮಾಜದ ಒಗ್ಗಟ್ಟು ಕೆಡದಂತೆ ನೋಡಿಕೊಳ್ಳಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಉತ್ತಮ ಸಂಸ್ಕಾರವನ್ನು ಅವರಲ್ಲಿ ಬೆಳೆಸಿ ಎಂದರು. ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಮಾತನಾಡಿ ಅಂಬಿಗರ ಚೌಡಯ್ಯನವರು ಮಹಾನ್ ಶರಣರಾಗಿದ್ದಾರೆ ಅವರು ಬಸವಣ್ಣನವರ ಸಾಮಾಜಿಕ ಕ್ರಾಂತಿಯಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾರೆ ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಅವುಗಳನ್ನು ನಮ್ಮ ಯುವಕರಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು. ರಾಜ್ಯ ಕೋಲಿ ಗಂಗಾಮತ ಸಮಾಜದ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ ಕುಮಾರ ಮಾತನಾಡಿ ರಾಜ್ಯ ರಾಜಕೀಯದಲ್ಲಿ ನಮ್ಮ ಸಮಾಜ ನಿರ್ಣಾಯಕ ಪಾತ್ರ ನಿರ್ವಹಿಸುತ್ತಿದ್ದರೂ ನಮ್ಮನ್ನು ನಿರಂತರ ನಿರ್ಲಕ್ಷಿಸಲಾಗುತ್ತಿದೆ ಇದು ನಿಲ್ಲಬೇಕು, ವಿಧಾನಸಭೆಯ ಮುಂದೆ ಅಂಬಿಗರ ಚೌಡಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಎಸ್ ಟಿ ಮೀಸಲಾತಿಗೆ ಕೇಂದ್ರಕ್ಕೆ ಶಿಫಾರಸ್ಸು ನಮ್ಮ ಪ್ರಮುಖ ಎರಡು ಬೇಡಿಕೆಗಳಾಗಿವೆ ಇದಕ್ಕಾಗಿ ಮಾನ್ಯ ಶಾಸಕರು ಪ್ರಯತ್ನಿಸಬೇಕು ಎಂದರು. ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಪೀಠಾದ್ಯಕ್ಷರಾದ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಹಾಗೂ ಶ್ರೀ ಸಿದ್ಧಲಿಂಗ ದೇವರು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ನಿಜಶರಣ ಅಂಬಿಗರ ಚೌಡಯ್ಯ ಸಮಾಜದ ತಾಲೂಕ ಅಧ್ಯಕ್ಷ ಪರಶುರಾಮ ಬಿ.ತಂಗಡಗಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ,ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ, ಸಾಮಾಜಿಕ ಹೋರಾಟಗಾರ ಶಿವಾಜಿ ಮೆಟಗಾರ, ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಅಮರೇಶಣ್ಣ ಕಾಮನಕೇರಿ, ಎಚ್ಎಸ್ ಪಾಟೀಲ, ಪ್ರಭುಗೌಡ ಮದರಕಲ್, ಶಶಿಕಾಂತ ಮೂಕಿಹಾಳ,ರಮೇಶ ಮೂಕಿಹಾಳ ಹಾಗೂ ಸಮಾಜದ ಗಣ್ಯರು ಹಿರಿಯರು ಉಪಸ್ಥಿತರಿದ್ದರು.


