ತಾಳಿಕೋಟಿ: ಪಾಲಕರು ತಮ್ಮ ಮಕ್ಕಳಿಗೆ ವಿದ್ಯಾ ಸಂಪತ್ತು ಕೊಡಲು ಹೆಚ್ಚು ಆಸಕ್ತಿ ವಹಿಸಬೇಕು. ಏಕೆಂದರೆ ವಿದ್ಯೆ ಎಂಬುದು ಸಕಲ ಸಂಪತ್ತುಗಳಲ್ಲಿ ಶ್ರೇಷ್ಠವಾದ ಸಂಪತ್ತಾಗಿದೆ ಎಂದು ದೇವರು ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ) ಹೇಳಿದರು. ಪಟ್ಟಣದ ಶ್ರೀ ರಾಘವೇಂದ್ರ ಗ್ರಾಮೀಣಾಭಿವೃದ್ಧಿ ಶಿಕ್ಷಣ ಸಂಸ್ಥೆ(ರಿ) ಇದರ ಅಡಿಯಲ್ಲಿ ನಡೆಯುತ್ತಿರುವ ವಿ.ಕೆ.ಎಚ್.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 2025-26 ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಗುರುವಾರ ಮಾತನಾಡಿದರು. ಇವತ್ತು ಬಹುತೇಕ ತಂದೆ-ತಾಯಂದಿರು ಮಕ್ಕಳಿಗಾಗಿ ಸಂಪತ್ತನ್ನು ಗಳಿಸಿ ಬಿಟ್ಟು ಹೋಗಲು ಬಯಸುತ್ತಾರೆ ಆದರೆ ಮಕ್ಕಳನ್ನೇ ಸಂಪತ್ತನ್ನಾಗಿ ಮಾಡಿ ಹೋಗಲು ನಾವೆಲ್ಲರೂ ಪ್ರಯತ್ನಿಸಬೇಕಾಗಿದೆ ಎಂದರು. ನಿವೃತ್ತ ಪ್ರಾಚಾರ್ಯ ಪ್ರೊ. ಎಂ.ಡಿ.ಬಳಗಾನೂರ ಅವರು ಮಾತನಾಡಿ ಪಾಲಕರು ಮಕ್ಕಳಿಗೆ ಕೇವಲ ಒಳ್ಳೆಯ ಶಿಕ್ಷಣ ಕೊಟ್ಟರೆ ಸಾಲದು ಒಳ್ಳೆಯ ಸಂಸ್ಕಾರಗಳನ್ನೂ ಕಲಿಸಿಕೊಡಬೇಕು. ನೈತಿಕ ಹಾಗೂ ಮಾನವೀಯ ಮೌಲ್ಯಗಳಿಲ್ಲದ ಶಿಕ್ಷಣಕ್ಕೆ ಯಾವ ಮಹತ್ವವೂ ಇಲ್ಲ. ಮಕ್ಕಳನ್ನು ಇಂಜಿನಿಯರ್ ಡಾಕ್ಟರ್ ಮಾಡುವುದರ ಜೊತೆಗೆ ಒಬ್ಬ ಒಳ್ಳೆಯ ಮನುಷ್ಯನನ್ನಾಗಿ ಮಾಡಿ ಎಂದರು. ಕ್ಷೇತ್ರ ಸಮನ್ವಯಾಧಿಕಾರಿ ಆರ್ ಬಿ ದಮ್ಮೂರಮಠ, ಪೀರ ಮೊಹಮ್ಮದ್ ಲಟಿಗೇರಿ,ಜೈನಬ ಗಝಾಲಿ ಮಾತನಾಡಿದರು. ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರಮ ಪೂಜ್ಯ ಸಿದ್ದಲಿಂಗ ದೇವರು ಕೇವಲ ಮಕ್ಕಳ ಅಂಕಗಳಿಗೆ ಮಹತ್ವ ನೀಡದೆ ಅವರ ಸರ್ವಾಂಗೀಣ ಪ್ರಗತಿಗಾಗಿ ಚಿಂತಿಸಿ ಅವರಲ್ಲಿ ಉದಾತ್ತ ಮೌಲ್ಯಗಳನ್ನು ಬೆಳೆಸಲು ಸದಾ ಕಾಳಜಿ ವಹಿಸಿ ಎಂದರು. ವಿಕೆಎಚ್ ಸಂಸ್ಥೆಯ ಅಧ್ಯಕ್ಷ ಪ್ರಲ್ಹಾದಸಿಂಗ್ ವಿ.ಹಜೇರಿ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಪಾತ್ರರಾದ ಎಂ.ಪಿ.ಸಿಪಾಯಿ, ಉತ್ತಮ ಪಾಲಕ ಸಂತೋಷಸಿಂಗ್ ಹಾಗೂ ಆದರ್ಶ ವಿದ್ಯಾರ್ಥಿ ಶಕೀಲ ಇನಾಮದಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲೆಯ ಕಾರ್ಯದರ್ಶಿ ಮಾಧುರಿ ಪ. ಹಜೇರಿ, ಮುಸ್ಲಿಂ ಬ್ಯಾಂಕ್ ಉಪಾಧ್ಯಕ್ಷ ರಫೀಕ್ ಬೇಪಾರಿ, ನಿರ್ದೇಶಕರಾದ ಸಲಾವುದ್ದೀನ್ ಇರ್ಫಾನ್ ಖಾಜಿ, ಸಾಹಿಲ್ ಮುರಾಳ, ಉಸ್ಮಾನಗನಿ ಖಾಜಿ, ಸಮಾಜ ಸೇವಕ ಡಾ.ಮೀರಾಶಾ ಮಕಾನದಾರ, ಸಿ.ಆರ್ಸಿ ಗಳಾದ ರಾಜು ವಿಜಾಪುರ, ಅಲ್ತಾಫ್ ಮುದ್ದೇಬಿಹಾಳ,ಅಲ್ ಹುದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಜಾವೀದ ಕೆಂಭಾವಿ,ಬಸನಗೌಡ ಹಳ್ಳಿ ಪಾಟೀಲ, ಮೌಲಾಸಾಬ ಶೇಕ, ಅಬ್ದುಲ್ ಜಬ್ಬಾರ ಹವಾಲ್ದಾರ, ಮುಖ್ಯ ಗುರುಮಾತೆ ರಾಜೇಶ್ವರಿ ಅಗ್ನಿ,ಆಡಳಿತ ಮಂಡಳಿ ನಿರ್ದೇಶಕರು, ಶಾಲಾ ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು. ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Leave a Reply

Your email address will not be published. Required fields are marked *