ಮುದ್ದೇಬಿಹಾಳ: ತಾಲೂಕಿನ ಢವಳಗಿ ಗ್ರಾಮದ ಮಡಿಕೇಶ್ವರ ರಸ್ತೆಯ ಪಕ್ಕದಲ್ಲಿ ಅನಧಿಕೃತ ವಸತಿ ನಿರ್ವಹಣೆ ಮಾಡುತ್ತಿರುವ “ವಿದ್ಯಾ ಸ್ಪೂರ್ತಿ” ಶಾಲೆಯ ಪರವಾನಗಿಯನ್ನು ರದ್ದುಪಡಿಸಬೇಕು ಹಾಗೂ ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಪಟ್ಟಣದ ತಹಶೀಲ್ದಾರ ಕಚೇರಿಯ ಮುಂದೆ ನಡೆಯುತ್ತಿರುವ ಆಗ್ರಹಿಸಿ ನಡೆಯುತ್ತಿರುವ ಸತ್ಯಾಗ್ರಹ ಗುರುವಾರ ಮುಂದುವರಿದಿತು.
ಬುದವಾರ ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (ಡಿಡಿಪಿಐ) ವೀರೇಶ ಸಾಲಿಮಠ ಭೇಟಿ ನೀಡಿ ಹೋರಾಟಗಾರರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಸಮಸ್ಯೆಯನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುತ್ತಾ ಸತ್ಯಾಗ್ರಹ ಹಿಂಪಡೆಯುವಂತೆ ಮನವಿ ಮಾಡಿದರು ಎಂದು ತಿಳಿದುಬಂದಿದೆ.
ಆದರೆ ಹೋರಾಟಗಾರರು ಯಾವುದೇ ತಾತ್ಕಾಲಿಕ ಭರವಸೆಗಳನ್ನು ಒಪ್ಪಲಿಲ್ಲ. ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಶಾಲೆಯ ಪರವಾನಗಿ ತಕ್ಷಣ ರದ್ದುಪಡಿಸಬೇಕು ಹಾಗೂ ಸಂಬಂಧಿತ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ತಮ್ಮ ಬೇಡಿಕೆಯನ್ನು ಸಂಪೂರ್ಣವಾಗಿ ಈಡೇರಿಸುವ ತನಕ ಹೋರಾಟ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.
ಹೋರಾಟಗಾರರು ಆರೋಪಿಸುವಂತೆ, ಸಂಬಂಧಿತ ವಸತಿ ಶಾಲೆ ಅಗತ್ಯ ಅನುಮತಿ ಮತ್ತು ನಿಯಮಗಳನ್ನು ಪಾಲಿಸದೇ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಭದ್ರತೆ ಮತ್ತು ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆಯವರು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚರ್ಚೆ ಫಲಕಾರಿಯಾಗದೆ ಹೋದ ಹಿನ್ನೆಲೆ, ಡಿಡಿಪಿಐ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟಿಸದೇ ಹಿಂದಿರುಗಿದ ಘಟನೆ ನಡೆದಿದೆ. ಇದರಿಂದಾಗಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸತ್ಯಾಗ್ರಹದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಪ್ರತಿಭಟನಾಕಾರರು ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಸಮಸ್ಯೆ ಪರಿಷ್ಕಾರವಾಗುವವರೆಗೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಧರಣಿ ಸತ್ಯಾಗ್ರಹದಲ್ಲಿ ಡಿ.ಎಸ್.ಎಸ್. ಜಿಲ್ಲಾಧ್ಯಕ್ಷ ಬಾಲಚಂದ್ರ ಹುಲ್ಲೂರ ,ಬ ಬಾಗೇವಾಡಿ ಘಟಕದ ಅಧ್ಯಕ್ಷರಾದ ಸುರೇಶ ದೊಡಮನಿ ಮಾರುತಿ ಸಿದ್ದಾಪೂರ, ಡಿಎಸ್ಎಸ್ ರಾಜ್ಯ ಮುಖಂಡ ದುರಗೆಪ್ಪ ದೊಡಮನಿ, ಶೇಖರ ಜಟ್ಟಗಿ, ಪರಸುರಾಮ ಹೊಲಮನಿ,ಸುರೇಶ ದೊಡಮನಿ,ಹನುಮಂತ ದೊಡಮನಿ, ಮುದುಕಪ್ಪ ದೊಂಕಮಡು, ಪ್ರಕಾಶ ಹಾದಿಮನಿ, ಬೀಮರಾವ ಹುಲ್ಲೂರ, ಸಂಗಮೇಶ ಢವಳಗಿ, ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು.

