ರಾಯಚೂರು ಫೆಬ್ರವರಿ 12 (ಕರ್ನಾಟಕ ವಾರ್ತೆ): ಬೇಸಿಗೆ ಆಗಮನದ ಹಿನ್ನೆಲೆಯಲ್ಲಿ ಈಗಾಗಲೇ ಬಿಸಿಲು ಏರಲಾರಂಭಿಸಿದೆ. ಆದ್ದರಿಂದ ರಾಯಚೂರು ಜಿಲ್ಲೆಯಲ್ಲಿ ಮುಂಬರುವ ಬೇಸಿಗೆಯ ಸಮಯದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನೂತನ ಜಿಲ್ಲಾಡಳಿತ ಭವನದಲ್ಲಿ ಕೇಸ್ವಾನ್ ಹಾಲನಲ್ಲಿ ಫೆ.12ರ ಸಂಜೆ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಈ ಭಾಗಕ್ಕೆ ನೀರು ಪೂರೈಸುವ ತುಂಗಭದ್ರಾ ಡ್ಯಾಮನ ಕ್ರಸ್ಟ್ಗೇಟ್‌ಗಳ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ ತುಂಗಾ ಕಾಲುವೆ ನೀರು ಅವಲಂಭಿಸಿರುವ ಸಿಂಧನೂರು, ಮಾನ್ವಿ, ಮಸ್ಕಿ, ಸಿರವಾರ ಮತ್ತು ರಾಯಚೂರು ತಾಲೂಕುಗಳಲ್ಲಿ ನೀರಿನ ಲಭ್ಯತೆ ಪರಿಸ್ಥಿತಿಯ ಬಗ್ಗೆ ಈಗಿನಿಂದಲೇ ಗಮನ ಹರಿಸಬೇಕು. ಈ ಭಾಗದ ಕೆರೆಗಳಲ್ಲಿ ಈಗಿರುವ ನೀರಿನ ಪ್ರಮಾಣ ಎಷ್ಟು? ಕೆರೆಗಳನ್ನು ಇನ್ಮುಂದೆ ಯಾವ ವೇಳೆಗೆ ತುಂಬಿಸಬೇಕು? ಎನ್ನುವಂತಹ ಅಂಶಗಳ ಬಗ್ಗೆ ಆಯಾ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪುರಸಭೆ, ನಗರಸಭೆ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಕಾರ್ಯಯೋಜನೆ ರೂಪಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಿಲ್ಲೆಯ ಆಯಾ ತಾಲೂಕಿನಲ್ಲಿನ ಕೆರೆಗಳಲ್ಲಿನ ನೀರಿನ ವ್ಯವಸ್ಥೆಯ ಬಗ್ಗೆ ಜಿಲ್ಲಾಧಿಕಾರಿಗಳು ಆಯಾ ತಹಸೀಲ್ದಾರಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು.
ಸಿಂಧನೂರ ತಾಲೂಕಿನಲ್ಲಿ ಒಟ್ಟು 155 ಕೆರೆಗಳಿದ್ದು, ಈ ಪೈಕಿ 151 ಕೆರೆಗಳು ಸಹ ಭಾಗಶಃ ತುಂಬಿವೆ. ಮಾರ್ಚ ಕೊನೆಯ ವಾರದಲ್ಲಿ ನಮಗೆ ನೀರಿನ ಅವಶ್ಯಕತೆ ಬರುತ್ತದೆ ಎಂದು ಸಿಂಧನೂರ ತಹಸೀಲ್ದಾರು ಸಭೆಗೆ ಮಾಹಿತಿ ನೀಡಿದರು. ಮಾನವಿ ತಾಲೂಕಿನಲ್ಲಿ ಒಟ್ಟು 18 ಕೆರೆಗಳಿದ್ದು ಎಲ್ಲ ಕೆರೆಗಳು ಭಾಗಶಃ ತುಂಬಿದ್ದು ಇನ್ನು 45 ದಿನಗಳವರೆಗೆ ನಮಗೆ ನೀರಿನ ಸಮಸ್ಯೆಯಾಗುವುದಿಲ್ಲ ಎಂದು ಮಾನ್ವಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಿರವಾರ ತಾಲೂಕಿನಲ್ಲಿ ಒಟ್ಟು 43 ಕೆರೆಗಳಿವೆ. ಈ ಪೈಕಿ 4 ಕೆರೆಗಳು ಪೂರ್ಣ ತುಂಬಿವೆ. ಇನ್ನು 39 ಕೆರೆಗಳು ಭಾಗಶಃ ತುಂಬಿವೆ. ಅತ್ತನೂರ ಮತ್ತು ಕಲ್ಲೂರ ಪಂಚಾಯಿತಿಯ ವ್ಯಾಪ್ತಿಯ ಕೆರೆಗಳಿಗೆ ನೀರಿನ ಕೊರತೆ ಇದೆ ಎಂದು ಸಿರವಾರ ತಾಲೂಕು ಅಧಿಕಾರಿಗಳು ಮಾಹಿತಿ ನೀಡಿದರು. ಮಸ್ಕಿ ತಾಲೂಕಿನಲ್ಲಿ ಒಟ್ಟು 21 ಕೆರೆಗಳಿದ್ದು, ಈ ಪೈಕಿ 16 ಕೆರೆಗಳಲ್ಲಿ ನೀರು ಇದೆ. ಇನ್ನುಳಿದ ಕೆರೆಗಳಿಗೆ ನೀರಿನ ಕೊರತೆಯಾಗಿದೆ ಎಂದು ಮಸ್ಕಿ ಪುರಸಭೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ರಾಯಚೂರು ತಾಲೂಕಿನಲ್ಲಿ 15 ಕೆರೆಗಳಿದ್ದು ಎಲ್ಲ ಕೆರೆಗಳು ಭಾಗಶಃ ತುಂಬಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮುದಗಲ್ ಪಟ್ಟಣದಲ್ಲಿ ಸದ್ಯಕ್ಕೆ ನೀರಿನ ತೊಂದರೆ ಇಲ್ಲ. ನಾರಾಯಾಣಪುರ ಡ್ಯಾಮನಿಂದ ಅವಶ್ಯಕ ಸಂದರ್ಭದಲ್ಲಿ ನೀರು ಪಡೆದುಕೊಳ್ಳವುದಾಗಿ ಅಲ್ಲಿನ ಪುರಸಭೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ರಾಯಚೂರು ಸಿಟಿಗೆ ತೊಂದರೆಯಾಗದಿರಲಿ: ರಾಯಚೂರು ಸಿಟಿ ಮತ್ತು ರಾಯಚೂರು ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಪರಿಸ್ಥಿತಿಯ ಬಗ್ಗೆ ಜಿಲ್ಲಾಧಿಕಾರಿಗಳು ಪಾಲಿಕೆಯ ಅಧಿಕಾರಿಗಳು ಮತ್ತು ತಹಸೀಲ್ದಾರ ಅವರಿಂದ ಮಾಹಿತಿ ಪಡೆದುಕೊಂಡರು. ಗಣೇಕಲ್ ಜಲಾಶಯ ಮತ್ತು ಅಲ್ಲಿನ ನೀರಿನ ನಿರ್ವಹಣೆ ಕುರಿತು ಗಮನ ಹರಿಸಿ ರಾಯಚೂರು ಸಿಟಿಗೆ ಸಮರ್ಪಕ ಕುಡಿವ ನೀರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಲಿಂಗಸೂರು ತಾಲೂಕಿನಲ್ಲಿ ಅವ್ಯವಸ್ಥೆಯಾಗದಿರಲಿ: ಲಿಂಗಸೂರು ತಾಲೂಕಿನಲ್ಲಿ ಕಳೆದ ಬಾರಿ ಬೇಸಿಗೆಯ ಅವಧಿಯಲ್ಲಿ ಕುಡಿವ ನೀರು ಪೂರೈಕೆಯಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಯ ಉಂಟಾಗಿತ್ತು. ಈ ವರ್ಷ ಹಾಗಾಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಬೇಸಿಗೆ ಅವಧಿಯಲ್ಲಿ ಲಿಂಗಸೂರ ತಾಲೂಕಿಗೆ ಇಂತಿಷ್ಟು ಪ್ರಮಾಣದ ನೀರು ಬೇಕು ಎಂದು ನಾಂರಾಯಣಪುರ ಡ್ಯಾಮನ ಅಧಿಕಾರಿಗಳಿಗೆ ನೀರಿನ ಬೇಡಿಕೆಯ ಪತ್ರ ತುರ್ತು ರವಾನೆಗೆ ಕ್ರಮ ವಹಿಸಬೇಕು ಎಂದು ಸಹಾಯಕ ಆಯುಕ್ತರು, ತಹಸೀಲ್ದಾರರು, ಪುರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಪ್ರತಿ ತಿಂಗಳು ಟಾಸ್ಕಪೋರ್ಸ್ ಸಭೆಗಳಾಗಲಿ: ಎಲ್ಲ ತಾಲೂಕುಗಳಲ್ಲಿ ಪ್ರತಿ ತಿಂಗಳು ಕಡ್ಡಾಯವಾಗಿ ಟಾಸ್ಕಪೋರ್ಸ್ ಸಭೆಗಳು ನಡೆಯುವಂತೆ ತಹಸೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಸಮನ್ವಯ ವಹಿಸಿ ಅಗತ್ಯ ವ್ಯವಸ್ಥೆ ಮಾಡಬೇಕು. ಕಾಲರಾ, ವಾಂತಿ ಬೇದಿ ಪ್ರಕರಣಗಳು ದಾಖಲು ಆಗದ ಹಾಗೆ ಮುಂಜಾಗ್ರತೆ ವಹಿಸಿ ನೀರಿನ ಪರೀಕ್ಷೆಗೆ ಮೊದಲಾದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಗ್ರಾಮೀಣ ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖಾಸಗಿ ಬೋರವೆಲ್‌ಗೆ ಆದ್ಯತೆ ನೀಡಿ: 2025-2026ನೇ ವರ್ಷದಲ್ಲಿ ಸಾಕಷ್ಟು ಮಳೆಯಾಗಿ ಅಂತರ್ಜಲ ನೀರಿನ ಮಟ್ಟ ಸುಧಾರಿಸಿದೆ. ಹಾಗಾಗಿ ನೀರಿನ ಸಮಸ್ಯೆ ಕಂಡು ಬಂದಲ್ಲಿ ಬೋರವೆಲ್ ಕೊರೆಯಿಸಲು ಕ್ರಮ ವಹಿಸಬೇಕು. ಕೊಳವೆಬಾವಿ ವಿಫಲವಾದಲ್ಲಿ ಹತ್ತಿರದ ಖಾಸಗಿ ಬೋರವೆಲ್‌ಗಳಿಂದಲೇ ನೀರು ಪೂರೈಕೆಗೆ ಹೆಚ್ಚಿನ ಒತ್ತು ಕೊಡಬೇಕು. ಟ್ಯಾಂಕರ್ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬಾರದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಪಂ ಸಿಇಓ ನಿರ್ದೇಶನ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಈಶ್ವರ ಕಾಂದೂ ಅವರು ಮಾತನಾಡಿ, ಯಾವುದೇ ಕಡೆಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಪೈಪಲೈನ್ ದುರಸ್ತಿಗೆ ಒತ್ತು ಕೊಡಬೇಕು. ಮೇಲ್ಮಟ್ಟದ ಜಲಾಗಾರಗಳನ್ನು ಪ್ರತಿ ತಿಂಗಳು ಕಡ್ಡಾಯವಾಗಿ ಶುಚಿಗೊಳಿಸಬೇಕು. ಕಾಲಕಾಲಕ್ಕೆ ನೀರಿನ ಪರೀಕ್ಷೆ ನಡೆಸಿಯೇ ನೀರು ಪೂರೈಕೆಗೆ ಒತ್ತು ಕೊಡಬೇಕು. ಈ ಬಗ್ಗೆ ಎಲ್ಲ ತಾಲೂಕಿನ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಎಲ್ಲ ಪಿಡಿಓಗಳು ಗಮನ ಹರಿಸಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ವಿಡಿಯೋ ಸಂವಾದ ಸಭೆಯಲ್ಲಿ ಸಹಾಯಕ ಆಯುಕ್ತರಾದ ಡಾ.ಹಂಪಣ್ಣ ಸಜ್ಜನ್, ಬಸವಣೆಪ್ಪ ಕಲಶೆಟ್ಟಿ, ಆಯಾ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ಕೆಬಿಜೆಎನ್‌ಎಲ್‌ನ ಅಧಿಕಾರಿ ಬಸನಗೌಡ, ಆರೋಗ್ಯ ಇಲಾಖೆಯ ಜಿಲ್ಲಾ ಸವೇಕ್ಷಣಾ ಅಧಿಕಾರಿ ಡಾ.ಗಣೇಶ್, ಗ್ರಾಮೀಣ ಕುಡಿಯುವ ನೀರು ಮತ್ತು ಸರಬರಾಜು ಇಲಾಖೆಯ ಅಭಿಯಂತರ ನಾಗರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

