ರಾಯಚೂರು ಫೆಬ್ರವರಿ 12 (ಕರ್ನಾಟಕ ವಾರ್ತೆ): ಬೇಸಿಗೆಯ ಅವಧಿಯಲ್ಲಿ ರಾಯಚೂರು ಗ್ರಾಮೀಣ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಸರಿಯಾದ ರೀತಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ವ್ಯವಸ್ಥೆಯಾಗುವುದು ಸೇರಿದಂತೆ ಫೆಬ್ರವರಿ, ಮಾರ್ಚ, ಏಪ್ರೀಲ್, ಮೇ ಹಾಗೂ ಜೂನ್ ಅವಧಿವರೆಗೆ ಬೇಸಿಗೆ ನಿರ್ವಹಣೆಗೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಫೆ.12ರಂದು ನಡೆದ ಟಾಸ್ಕ್ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆಯ ಅವಧಿಯಲ್ಲಿ ತುರ್ತು ಸಂದರ್ಭದಲ್ಲಿ ನೀರು ಪೂರೈಕೆಗೆ ಅನುಕೂಲವಾಗುವಂತೆ ಅಗತ್ಯ ಏರ್ಪಾಡನ್ನು ಈಗಿನಿಂದಲೇ ಮಾಡಿಕೊಳ್ಳಬೇಕು. ಮುಖ್ಯ ಜಲಸಂಗ್ರಹಗಾರಗಳಾದ ಕೆರೆಗಳಲ್ಲಿ ಲಭ್ಯವಿರುವ ಗರಿಷ್ಟ ಮತ್ತು ಕನಿಷ್ಟ ನೀರಿನ ಸಾರ‍್ಥ್ಯದ ಬಗ್ಗೆ ಗಮನ ಹರಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಬಹುದಾದ ಗ್ರಾಮ ಪಂಚಾಯತ್‌ಗಳ ಸಂಖ್ಯೆ ಎಷ್ಟು? ಗ್ರಾಮಗಳ ಸಂಖ್ಯೆ ಎಷ್ಟು? ಯಾವ ಯಾವ ಕಡೆಗಳಲ್ಲಿ ನೀರಿನ ಸಮಸ್ಯೆಯಾಗಬಹುದು? ನೀರು ಸರಬರಾಜು ಮೂಲಗಳಾದ ನದಿ ಹಳ್ಳ ಬೋರವೆಲ್‌ಗಳ ಸಂಖ್ಯೆ ಎಷ್ಟು? ಬೇಕಾಗುವ ಅನುದಾನ ಎಷ್ಟು? ಇದುವರೆಗೆ ಬಾಡಿಗೆ ಪಡೆದಿರುವ ಖಾಸಗಿ ಬೋರವೆಲ್‌ಗಳ ಸಂಖ್ಯೆ? ಖಾಸಗಿ ಬೋರವೆಲ್ ಮೂಲಕ ನೀರು ಸರಬರಾಜು ಮಾಡಿದ ಗ್ರಾಮಗಳ ಸಂಖ್ಯೆ? ಈ ರೀತಿಯ ನಾನಾ ಅಂಶಗಳ ಬಗ್ಗೆ ಕೂಡಲೇ ಅಧಿಕಾರಿಗಳು ಕಾಳಜಿಯಿಂದ ಕ್ರಿಯಾಯೋಜನೆ ಸಿದ್ಧಪಡಿಸಿ ಕಾರ್ಯನುಷ್ಠಾನ ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದರು.
ಬೇಸಿಗೆಯ ಅವಧಿಯಲ್ಲಿ ಯಾವುದೇ ಕಡೆಗಳಲ್ಲಿ ಬೋರವೆಲ್‌ಗಳಿಂದ ನೀರು ಸ್ಥಗಿತವಾಗಿ ಕೊರತೆಯಾದಲ್ಲಿ ಅಂತಹ ಕಡೆಗೆ ಖಾಸಗಿ ಬೋರವೆಲ್‌ಗಳು ಎಲ್ಲೆಲ್ಲಿ ಇವೆ ಎಂಬುದರ ಬಗ್ಗೆ ಮುಂಚಿತವಾಗಿಯೇ ಪಟ್ಟಿ ಮಾಡಿ ರ‍್ಯಾಯ ವ್ಯವಸ್ಥೆಗೆ ಈಗಿನಿಂದಲೇ ಯೋಜನೆ ರೂಪಿಸಬೇಕು ಎಂದು ಶಾಸಕರು ಎಲ್ಲ ಪಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೇಲ್ವಿಚಾರಣೆಗೆ ಸೂಚನೆ: ನಮ್ಮ ಗ್ರಾಮಕ್ಕೆ ನೀರು ಸಿಗುತ್ತಿಲ್ಲ ಎಂದು ಬೇಸಿಗೆಯ ಅವಧಿಯಲ್ಲಿ ಯಾವುದೇ ಗ್ರಾಮಸ್ಥರಿಂದ ದೂರುಗಳು ಬರಬಾರದು. ಪಿಡಿಓಗಳು ಪಂಚಾಯತ್ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಕಾಲಕಾಲಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಬಗ್ಗೆ ಗ್ರಾಮಸ್ಥರಿಂದ ತಿಳಿದುಕೊಳ್ಳಬೇಕು. ಗ್ರಾಮಸ್ಥರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದ ಶಾಸಕರು, ತಹಸೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಕಾಲಕಾಲಕ್ಕೆ ಕಂದಾಯ ಮತ್ತು ಪಿಡಿಓಗಳ ಸಭೆ ನಡೆಸಿ ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.
ವಾರದ ಗಡುವು: ನೀವು ನಿಯಮಿತವಾಗಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೀರಾ? ಆಯಾ ಗ್ರಾಮಗಳಲ್ಲಿ ನೀರಿನ ಪರಿಸ್ಥಿತಿ ಏನಿದೆ ಎಂಬುದು ತಿಳಿದಿದೆಯಾ? ಎಂದು ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕರು ಪ್ರಶ್ನಿಸಿದರು. ಗ್ರಾಮೀಣ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಕೆರೆಗಳ ಸ್ಥಿತಿ, ಕುಡಿವ ನೀರಿನ ಪರಿಸ್ಥಿತಿ ಸೇರಿದಂತೆ ಸಮಗ್ರ ಮಾಹಿತಿಯನ್ನು ನೀಡುವಂತೆ ಆರ್‌ಡಬ್ಲ್ಯಎಸ್ ಅಧಿಕಾರಿಗಳಿಗೆ ಶಾಸಕರು ವಾರದ ಗಡುವು ವಿದಿಸಿದರು.
ವರದಿ ಒಪ್ಪಿಸಿದ ಅಧಿಕಾರಿಗಳು: ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಗ್ರಾಮ, ಹೋಬಳಿವಾರು ಕುಡಿವ ನೀರಿನ ವಾಸ್ತವ ಪರಿಸ್ಥಿತಿಯ ಬಗ್ಗೆ ಸಮಗ್ರ ಅವಲೋಕಿಸಿದರು. ತಮ್ಮ ತಮ್ಮ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬೇಸಿಗೆ ನಿರ್ವಹಣೆಗೆ ಮಾಡಿಕೊಂಡ ಸಿದ್ಧತೆ ಬಗ್ಗೆ ಆಯಾ ಪಿಡಿಓಗಳು ಸಭೆಗೆ ವರದಿ ಒಪ್ಪಿಸಿದರು.
ಸಭೆಯಲ್ಲಿ ಎಪಿಎಂಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಗೌಡ ತಲಮಾರಿ, ತಹಸೀಲ್ದಾರ ಸುರೇಶ ವರ್ಮಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪವಾರ, ಅರಣ್ಯ ಸಂರಕ್ಷಣಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯತಗಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಇದ್ದರು.


