ಕರ್ನಾಟಕ ಸರಕಾರವು ಜನರ ಆರೋಗ್ಯದ ದೃಷ್ಟಿಯಿಂದ ವಿವಿಧ ಆರೋಗ್ಯ ಯೋಜನೆ, ಸೇವೆಗಳ ಮಾಹಿತಿಯನ್ನು ಗ್ರಾಮೀಣ ಕಲೆಯ ಮೂಲಕ ಜನತೆಗೆ ಮುಟ್ಟಿಸುವ ಕಾರ್ಯವನ್ನು ಜನತೆಯು ಸದುಪಯೋಗ ಪಡೆಯುವಂತೆ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಶರಣಬಸವರಾಜ ತಿಳಿಸಿದರು.
ಇತ್ತೀಚಿಗೆ ಜರುಗಿದ ಎಡದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಾನಪದ ಕಲಾ ಪ್ರದರ್ಶನದ ಮೂಲಕ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜಾಗೃತಿಯ ಕಲಾ ಪ್ರದರ್ಶನ ಕುರಿತು ಮಾತನಾಡಿ ಉತ್ಸವದ ನಂತರ ಗ್ರಾಮೀಣ ಭಾಗದಲ್ಲಿ ವೈಯಕ್ತಿಕ ಆರೋಗ್ಯಕ್ಕೆ ರಕ್ತಹೀನತೆಗೆ ತಡೆಗೆ ಗ್ರಾಮ ಪಂಚಾಯತಗಳ ಮೂಲಕ ಶೌಚಾಲಯ ಬಳಕೆಗೆ ನಡೆಯುತ್ತಿರುವ ಅಭಿಯಾನ ಕುರಿತು ಹೆಚ್ಚು ಮಾಹಿತಿ ನೀಡಲು ಹಾಗೂ ಆರೋಗ್ಯ ಸೇವೆಗಳನ್ನು ಜನತೆಗೆ ಆಸ್ಪತ್ರೆಗೆ ಸಂತಸದಿಂದ ಆಗಮಿಸಿ ಸೇವೆ ಪಡೆಯುವ ಬಗ್ಗೆ ವ್ಯಾಪಕ ಮಾಹಿತಿ ನೀಡಲು ಹಾಗೂ ಜನತೆ ಇದರ ಸದುಪಯೋಗ ಪಡೆಯಲು ವಿನಂತಿಸಿದರು.
ಈ ಸಂದರ್ಭದಲ್ಲಿ ಮುಖಾಮುಖಿ ಕಲಾ ತಂಡವು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಒದಗಿಸುವ ಉಚಿತ ಸುರಕ್ಷಿತವಾದ ಹೆರಿಗೆ ಸೇವೆ, ರಕ್ತಹೀನತೆ ತಡೆ, ತಾಯಿ ಎದೆಹಾಲಿನ
ಮಹತ್ವ, ಲಸಿಕೆಗಳು, ಹದಿಹರಿಯದವರ ಆರೋಗ್ಯ ಸಮಸ್ಯೆಗಳು, ಅಗತ್ಯವುಳ್ಳವರಿಗೆ ರಕ್ತ ಒದಗಿಸುವಿಕೆ, ಉಚಿತ ಕನ್ನಡಕ ವಿತರಣೆ, ಕಣ್ಣಿನ ಪೋರೆ ಶಸ್ತ್ರಚಿಕಿತ್ಸೆ, ದಂತಭಾಗ್ಯದಡಿ ಹಲ್ಲಿನ ಸೇಟ್ ಅಳವಡಿಕೆ, ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ, ಹೃದಯ ಆರೈಕೆಗಾಗಿ ಡಾ ಪುನೀತ್ ರಾಜಕುಮಾರ್ ಹೃದಯಜ್ಯೋತಿ ಯೋಜನೆ, ಕಿಡ್ನಿ ಆರೈಕೆಗೆ ಡಯಾಲಿಸಿಸ್ ಸೇವೆ ಮುಂತಾದವುಗಳು ಹಾಗೂ ಬಾಲ್ಯವಿವಾಹ ತಡೆ, ಭ್ರೂಣ ಲಿಂಗಪತ್ತೆ ನಿಷೇಧ ಕಾಯ್ದೆಯಡಿ ದಂಡ ಜೈಲು ಶಿಕ್ಷೆ, ನಗುಮಗು, 108 ಆಂಬ್ಯುಲೆನ್ಸ್ ಸೇವೆ, ಸಮುದಾಯದಲ್ಲಿ ಕಂಡುಬರಬಹುದಾದ ಸಾಂಕ್ರಾಮಿಕ ರೋಗಗಳ ತಡೆಗೆ ಕ್ಷೀಪ್ರ ನಿಗಾವಣೆ, ಪರೀಕ್ಷೆ, ಕುಷ್ಟ ರೋಗ, ಕ್ಷಯರೋಗ, ಉಪಶಮನ ಆರೈಕೆ, ಆಪ್ತಸಮಾಲೋಚನೆ,
ಕುರಿತು ಜಾಗೃತಿ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿ ಡಾ ಅಮೃತ್ ಹುಕ್ಕೇರಿ, ವೈದ್ಯಾಧಿಕಾರಿ, ಜಿಲ್ಲಾ ಪಂಚಾಯತನ ಆಸ್ಪರೇಷನ್ ಕಾರ್ಯಕ್ರಮದ ಡಾ ಜ್ಞಾನಸುಂದರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಕೆಕೆಆರ್‌ಟಿಸಿ ಅಧಿಕಾರಿಗಳು, ಡಿವೈಹೆಚ್‌ಇಓ ಬಸಯ್ಯ, ಹಾಗೂ ಸಮನ್ವಯ ಕಲಾ ತಂಡದ ಉಮಾಪತಿ ಸೇರಿದಂತೆ ಕಲಾವಿದರು, ಸಾರ್ವಜನಿಕರು ಉಪಸ್ಥಿತರಿದ್ದರು.

