ಮಾನ್ವಿ : ಪಟ್ಟಣದ ಧ್ಯಾನ ಮಂದಿರದ ಆವರಣದಲ್ಲಿ ಕಲ್ಮಠ ಗಾರಿಗೆ ಜಾತ್ರೆ ಅಂಗವಾಗಿ ಕೃಷಿ ಇಲಾಖೆ, ಕೃಷಿ ವಿಶ್ವವಿದ್ಯಾಲಯ ರಾಯಚೂರು, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಮಾಧ್ಯಮ ಸಮಿತಿ ವತಿಯಿಂದ ಹಮ್ಮಿಕೊಂಡ ಜಿಲ್ಲಾ ಮಟ್ಟದ ರೈತ ಸಮಾವೇಶವನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಡಾ. ಎ.ಆರ್. ಕುರುಬರ ಉದ್ಘಾಟಿಸಿದರು. ದೇಶದ 140 ಕೋಟಿ ಜನರು ತಮ್ಮ ನಿತ್ಯದ ಆಹಾರಕ್ಕಾಗಿ ರೈತನನ್ನೇ ಅವಲಂಬಿಸಿದ್ದಾರೆ. ಅನ್ನದಾತನಾದ ರೈತನನ್ನು ದೇವರ ಸ್ವರೂಪದಂತೆ ಸ್ಮರಿಸಬೇಕು ಎಂದು ಅವರು ಹೇಳಿದರು. ರೈತರು ಯಶಸ್ವಿ ಕೃಷಿಕರ ಜಮೀನುಗಳಿಗೆ ಕುಟುಂಬ ಸಮೇತ ಭೇಟಿ ನೀಡಿ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಂಕಷ್ಟಗಳಿಂದ ಹೊರಬಂದು ಲಾಭದಾಯಕ ಕೃಷಿ ಸಾಧ್ಯವಾಗುತ್ತದೆ ಎಂದರು. ಭತ್ತದ ನಂತರ ಎಳ್ಳು ಮತ್ತು ಸಾಸಿವೆ ಬೆಳೆ ಪದ್ಧತಿಯನ್ನು ಜಿಲ್ಲೆಯ 200 ಎಕರೆ ಪ್ರದೇಶದಲ್ಲಿ ಪರಿಚಯಿಸಿದ್ದು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಪಡೆಯುತ್ತಿರುವುದಾಗಿ ತಿಳಿಸಿದರು. ತಾಳೆ ಬೆಳೆಗೆ ಕೇಂದ್ರ ಸರ್ಕಾರ ನಿಗದಿ ಬೆಲೆ ಘೋಷಿಸಿರುವುದರಿಂದ ರೈತರು ಅದನ್ನು ಬೆಳೆಯಬಹುದು ಎಂದು ಸಲಹೆ ನೀಡಿದರು. ಭೂಮಿಯ ಆರೋಗ್ಯ ಕಾಪಾಡಿದರೆ ಮಾತ್ರ ಉತ್ತಮ ಆರೋಗ್ಯ ಮತ್ತು ಗುಣಮಟ್ಟದ ಆಹಾರ ಉತ್ಪಾದನೆ ಸಾಧ್ಯ ಎಂದು ಹೇಳಿದರು.
ಕೃಷಿ ವಸ್ತು ಪ್ರದರ್ಶನ ಮಳಿಗೆಗಳನ್ನು ಉದ್ಘಾಟಿಸಿದ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಾದ ಪ್ರಕಾಶ್ ಆರ್. ಚೌಹಾಣ್ ಮಾತನಾಡಿ, ಸರ್ಕಾರದ ಯೋಜನೆಗಳು ಹಾಗೂ ಸಹಾಯಧನ ಸೌಲಭ್ಯಗಳನ್ನು ರೈತರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಕಲ್ಮಠದ ಪೀಠಾಧ್ಯಕ್ಷರಾದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಗಾರಿಗೆ ಜಾತ್ರೆಯ ಅಂಗವಾಗಿ ಜಿಲ್ಲೆಯ ರೈತರಿಗೆ ಆಧುನಿಕ ಕೃಷಿ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ ಎಂದರು. ಚೀಕಲಪರ್ವಿ ಶ್ರೀ ರುದ್ರಮುನೀಶ್ವರ ಮಠದ ಸದಾಶಿವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದರು.
ಕಲ್ಮಠ ಶ್ರೀ ವಿರೂಪಾಕ್ಷೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ವತಿಯಿಂದ ಹಮ್ಮಿಕೊಂಡ ಉಚಿತ ಆರೋಗ್ಯ ಶಿಬಿರವನ್ನು ತಹಶೀಲ್ದಾರ್ ಭೀಮರಾಯ ಬಿ. ರಾಮಸಮುದ್ರ ಚಾಲನೆ ನೀಡಿ, ಕಂದಾಯ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ್ ಬೆಟ್ಟದೂರು ವಹಿಸಿಕೊಂಡು, ಸಂಪ್ರದಾಯಿಕ ಬೆಳೆ ಪದ್ಧತಿಯ ಜೊತೆಗೆ ಗ್ಯಾರಂಟಿ ಆದಾಯ ನೀಡುವ ಬೆಳೆ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮಂಡ್ಯದ ಸಾವಯವ ರೈತ ಕೃಷ್ಣಪ್ಪ ಬೆನ್ನೂರು ಪಂಚತರಣ್ಗಿಣಿ ಐದು ಹಂತಗಳ ಕೃಷಿ ಪದ್ಧತಿ ಕುರಿತು ವಿವರಿಸಿದರು. ಹಿರಿಯ ಪರಿಸರ ಅಂಕಣಕಾರ ಅಮರೇಗೌಡ ಗೋನಾವರ ತುಂಗಭದ್ರ ಜಲಾಶಯ ಹಾಗೂ ನೀರಿನ ಸಮರ್ಪಕ ಬಳಕೆ ಕುರಿತು ಉಪನ್ಯಾಸ ನೀಡಿದರು. ಕೃಷಿ ವಿಜ್ಞಾನಿಗಳಾದ ಡಾ. ಪ್ರಭುರಾಜ್ ಎ., ಡಾ. ಎಂ.ಎ. ಬಸವಣ್ಣೆಪ್ಪ, ಡಾ. ತಿಮ್ಮಣ್ಣ ಹಾಗೂ ಇತರರು ಇ-ಸ್ಯಾಪ್ ತಂತ್ರಜ್ಞಾನ, ಸಾವಯವ ಕೃಷಿ ಮತ್ತು ಮನೆಯಂಗಳ ತೋಟ ಕುರಿತು ಮಾಹಿತಿ ನೀಡಿದರು. ವಿವಿಧ ತಾಲೂಕುಗಳ ಕೃಷಿ ಕ್ಷೇತ್ರ ಸಾಧಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಡಾ. ಜೀವನೇಶ್ವರಯ್ಯ, ಟಿ.ಎ.ಪಿ.ಸಿ.ಎಂ.ಸಿ ಅಧ್ಯಕ್ಷ ತಿಮ್ಮರೆಡ್ಡಿ ಭೋಗವತಿ, ಸಹಾಯಕ ಕೃಷಿ ನಿರ್ದೇಶಕ ಗುರುನಾಥ ಭೂಸನೂರ, ಮಹಾಸಭಾ ಜಿಲ್ಲಾಧ್ಯಕ್ಷ ಚಂದ್ರಶೇಖರ ಮಿರ್ಜಾಪುರ ಸೇರಿದಂತೆ ಅನೇಕ ಗಣ್ಯರು ಮತ್ತು ರೈತರು ಭಾಗವಹಿಸಿದರು. ಮಯೂರಿ ನೃತ್ಯ ಕಲಾ ತಂಡದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ಕೃಷಿ ಇಲಾಖೆ, ಬಸವ ಕೈಗಾರಿಕಾ ಸಂಸ್ಥೆ, ಸ್ಟೆಪ್ಪಿಂಗ್ ಸ್ಟೋನ್ ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳ ಕೃಷಿ ವಸ್ತು ಪ್ರದರ್ಶನ ರೈತರ ಗಮನ ಸೆಳೆದಿತು.

Leave a Reply

Your email address will not be published. Required fields are marked *