ಮಾನ್ವಿ : ಕೇಂದ್ರ ಸರ್ಕಾರ ಜಾರಿಗೊಳಿಸಿರುವ 4 ಲೇಬರ್ ಕೋಡ್‌ಗಳು ಕಾರ್ಮಿಕ ವರ್ಗದ ಹಕ್ಕುಗಳಿಗೆ ಮಾರಕವಾಗಿವೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷರಾದ ಹೆಚ್. ಶರ್ಪುದ್ದೀನ್ ಪೋತ್ನಾಳ ಆರೋಪಿಸಿದರು. ಇಂದು ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗ್ರೇಡ್–2 ತಹಸೀಲ್ದಾರ್ ಅಬ್ದುಲ್ ವಾಹಿದ್ ಅವರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, 29 ಕಾರ್ಮಿಕ ಕಾಯ್ದೆಗಳನ್ನು ರದ್ದುಪಡಿಸಿ 4 ಸಂಹಿತೆಗಳ ರೂಪದಲ್ಲಿ ಜಾರಿಗೊಳಿಸಿರುವ ಹೊಸ ನೀತಿ ಕಾರ್ಮಿಕರ ವೇತನ, ಇಎಸ್‌ಐ, ಪಿಎಫ್, ಗ್ರಾಚ್ಯುಟಿ ಸೇರಿದಂತೆ ಹಕ್ಕುಗಳನ್ನು ಕುಂಠಿತಗೊಳಿಸುತ್ತಿದೆ ಎಂದು ಹೇಳಿದರು. ಕನಿಷ್ಠ ವೇತನ ಹೆಚ್ಚಳಕ್ಕೆ ಸ್ಪಷ್ಟ ಭರವಸೆ ನೀಡದೇ ಕಾರ್ಮಿಕರನ್ನು ಅಸ್ಥಿರ ಉದ್ಯೋಗ ವ್ಯವಸ್ಥೆಗೆ ತಳ್ಳುವ ಪ್ರಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಲ್ಲದೆ ನರೇಗಾ ಯೋಜನೆಯನ್ನು ದುರ್ಬಲಗೊಳಿಸುವುದು, ವಿದ್ಯುತ್ ಖಾಸಗೀಕರಣ, ಭೂಸ್ವಾಧೀನ ತಿದ್ದುಪಡಿ ಕಾಯ್ದೆಗಳ ಮೂಲಕ ರೈತರ ಹಿತಾಸಕ್ತಿಗೆ ಧಕ್ಕೆ ಉಂಟುಮಾಡಲಾಗುತ್ತಿದೆ. ಅಂಗನವಾಡಿ, ಬಿಸಿಯೂಟ, ಆಶಾ ಸೇರಿದಂತೆ ಸ್ಕೀಮ್ ನೌಕರರನ್ನು ಖಾಯಂ ಮಾಡದೆ ಕಡಿಮೆ ಗೌರವಧನದಲ್ಲಿ ದುಡಿಸಿಕೊಳ್ಳುತ್ತಿರುವುದು ಅನ್ಯಾಯಕರವಾಗಿದೆ.

ತಕ್ಷಣವೇ 4 ಲೇಬರ್ ಕೋಡ್‌ಗಳನ್ನು ಹಿಂಪಡೆದು, ಕಾರ್ಮಿಕ–ರೈತರ ಪರ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಐಟಿಯುಸಿ ಸಂಗಯ್ಯಸ್ವಾಮಿ ಚಿಂಚರಕಿ, ಎಐಟಿಯುಸಿ ಸಂಚಾಲಕರಾದ ಎಂ.ಬಿ. ಸಿದ್ರಾಮಯ್ಯಸ್ವಾಮಿ, ಎಐಯುಟಿಯುಸಿ ಜಿಲ್ಲಾ ಸಂಚಾಲಕರಾದ ಚನ್ನಬಸವ ಜಾನೇಕಲ್, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರುದ್ರಪ್ಪ ನಾಯಕ, ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ ಅಂಬಣ್ಣ ನಾಯಕ ಬ್ಯಾಗವಾಟ್, ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಕಾಂ. ಚನ್ನಮ್ಮ, ಬಿಸಿಯೂಟ ನೌಕರರ ಸಂಘ ಅಧ್ಯಕ್ಷೆ ಕಾಂ. ತೆರೇಸಾ ಪಟ್ಟದಕಲ್, ಕಟ್ಟಡ ಕಾರ್ಮಿಕರ ಸಂಘದ ಪ್ರ. ಕಾರ್ಯದರ್ಶಿ ಆಂಜನೇಯ್ಯ ಕೋಟೆ, ಸಿದ್ದಲಿಂಗಯ್ಯ, ಪಿ. ಲಕ್ಷ್ಮೀಭಾಯಿ ಪೆರಿಕಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *