ಹನ್ನೆರಡನೆಯ ಶತಮಾನದ ಶರಣರು ಕಾಯಕದ ಜೊತೆಗೆ ಬದುಕು ರೂಪಿಸಿಕೊಳ್ಳುವ ಕಲೆಯನ್ನು ಹೇಳಿಕೊಟ್ಟಿದ್ದಾರೆ. ಶರಣರ ಮಾರ್ಗದಲ್ಲಿ ಸಾಗುವ ಮೂಲಕ ಪ್ರತಿಯೊಬ್ಬರೂ ಸುಂದರ ಬದುಕು ರೂಪಿಸಿಕೊಳ್ಳಬೇಕಿದೆ’ ಎಂದು ತಹಶೀಲ್ದಾರ್ ಸುರೇಶ ವರ್ಮಾ ಹೇಳಿದರು.ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಉರಿಲಿಂಗಪೆದ್ದಿ, ಡೋಹರ ಕಕ್ಕಯ್ಯ ಹಾಗೂ ಸಮಗಾರ ಹರಳಯ್ಯ ಅವರು ಕಾಯಕದ ಜೊತೆಗೆ ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜವನ್ನು ತಿದ್ದುತ್ತಿದ್ದರು. ಮೌಢ್ಯತೆ ತೊಲಗಿಸಿ ಸಮಾಜ ಸಮಾನತೆಯತ್ತ ಕೊಂಡೊಯ್ಯುವುದು ಶರಣರ ಗುರಿಯಾಗಿತ್ತು. ಸಮ ಸಮಾಜ ನಿರ್ಮಾಣ ಅವರ ಧ್ಯೇಯವಾಗಿತ್ತು. ಆದರೆ, ಇಂದು ಮೋಸ, ವಂಚನೆಗಳು ಹೆಚ್ಚಾಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

 

ಕಂದಾಯ ಇಲಾಖೆಯ ಆಡಳಿತ ವಿಭಾಗದ ಉಪ ಆಯುಕ್ತ ಬಿ.ಶರಣಪ್ಪ ಸತ್ಯಂಪೇಟೆ,’ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಉರಿಲಿಂಗಪೆದ್ದಿ, ಡೋಹರ ಕಕ್ಕಯ್ಯ ಹಾಗೂ ಸಮಗಾರ ಹರಳಯ್ಯ ಅವರು ಶರಣರಲ್ಲೇ ಪ್ರಮುಖರಾಗಿದ್ದಾರೆ. 770 ಅಮರಂಗಳಲ್ಲಿ ಈ ಐವರು ಮೊದಲಿಗರಾಗಿದ್ದಾರೆ. ಮೊದಲ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ನೀಡಿದ ಶರಣ ಸಾಲಿನಲ್ಲಿ ಐವರು ಕಾಯಕ ಶರಣರು ಹೆಸರು ಇಂದಿಗೂ ಮುಂಚೂಣಿಯಲ್ಲಿದೆ’ ಎಂದು ಬಣ್ಣಿಸಿದರು.

 

ಪ್ರಮುಖರಾದ ಚನ್ನಪ್ಪಗೌಡ ಪಾಟೀಲ, ಭೀಮರಾಜ, ಎಸ್.ರಾಜು, ಜಿ.ವೇಣುಗೋಪಾಲ, ಯಮುನಪ್ಪ, ಹನುಮಂತಪ್ಪ. ಈರಣ್ಣ ಬೆಂಗಾಲಿ ಉಪಸ್ಥಿತರಿದ್ದರು.

 

ಇದಕ್ಕೂ ಮೊದಲು ನಗರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ರಂಗ ಮಂದಿರದವರೆಗೆ ಶರಣರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಅಧಿಕಾರಿಗಳು ಹಾಗೂ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *