ತಾಳಿಕೋಟಿ: ಮನುಷ್ಯನ ಬದುಕು ಇಂದು ಯಾಂತ್ರಿಕೃತ ಗೊಂಡಿರುವುದರಿಂದ ಒತ್ತಡದಿಂದಾಗಿ ಮಾನಸಿಕ ನೆಮ್ಮದಿ ಇಲ್ಲದಂತಾಗಿದೆ. ಮಹಾಪುರುಷರ ಸಂತ ಶರಣರ ಜೀವನದ ಕುರಿತು ಪ್ರವಚನಗಳನ್ನು ಆಲಿಸುವುದರಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಿ ಜೀವನ ಪಾವನವಾಗುತ್ತದೆ ಎಂದು ದೇವರ ಹಿಪ್ಪರಗಿ ಪರದೇಶಿ ಮಠದ ಪೂಜ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ನಾವದಗಿ ಗ್ರಾಮದ ಶ್ರೀ ಪರ್ವತೇಶ್ವರ ಬ್ರಹನ್ಮಠದ ಷ.ಬ್ರ.108 ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ” ಗುಡ್ಡಾಪುರದ ಶ್ರೀ ದಾನಮ್ಮ ದೇವಿ ಪುರಾಣ” ಆರಂಭೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಲಕೇರಿಯ ಪೂಜ್ಯ ಶ್ರೀ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ರಾಜೇಂದ್ರ ಶ್ರೀಗಳ ಗುರು ಪಟ್ಟಾ ಧಿಕಾರದ ಕಾರ್ಯಕ್ರಮವನ್ನು ಇಡೀ ನಾಡಿನಲ್ಲಿಯೇ ಹೆಸರುವಾಸಿಯಾಗಿ ಮಾಡಿದ್ದೀರಿ ಇದು ನೀವು ಪೂಜ್ಯರ ಹಾಗೂ ಶ್ರೀಮಠದ ಕುರಿತು ಹೊಂದಿರುವ ಅಪಾರ ಕಾಳಜಿಯನ್ನು ತೋರಿಸುತ್ತದೆ ಈ ಪುರಾಣ ಕಾರ್ಯಕ್ರಮ ಮಾರ್ಚ್ 2ರವರೆಗೆ ನಡೆಯಲಿದೆ ಇದರ ಸದುಪಯೋಗ ಮಾಡಿಕೊಳ್ಳಿ ಎಂದರು. ಸಾಸನೂರ ತುಂಬಗಿ ಹಿರೇಮಠದ ಮ.ನಿಪ್ರ. ಶ್ರೀಮಹಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪೂಜ್ಯ ಷ.ಬ್ರ.ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಿದ್ದರು. ವೇ.ಮೂ.ಡಾ. ಗುರುಲಿಂಗಯ್ಯ ಹಿರೇಮಠ(ಶಹಾಪುರ) ಸಮ್ಮುಖ ವಹಿಸಿದ್ದರು. ವೇದಿಕೆ ಕಾರ್ಯಕ್ರಮ ಮುನ್ನ ಗ್ರಾಮ ದೇವತೆಗೆ ಉಡಿತುಂಬಿ ಶ್ರೀ ಪರ್ವತೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ ಮೆರವಣಿಗೆಯೊಂದಿಗೆ ವೇದಿಕೆಗೆ ಆಗಮಿಸಲಾಯಿತು. ಪ್ರವಚನಕಾರ ವೇ.ಮೂ.ರಾಚಯ್ಯ ಶಾಸ್ತ್ರಿ ಹಿರೇಮಠ, ಸಂಗೀತಗಾರ ಸೋಮಯ್ಯ ಸ್ವಾಮಿ, ತಬಲವಾದಕ ಮಹಾಂತೇಶ ಹರನಾಳ,ಸಾಹಿತಿ ಬಸವರಾಜ ಗೊರಜಿ(ಕೊಡಗಾನೂರ),ಗ್ರಾಮದ ಗಣ್ಯರು ಹಿರಿಯರು ಹಾಗೂ ಮಠದ ಸದ್ಭಕ್ತರು ಇದ್ದರು.

Leave a Reply

Your email address will not be published. Required fields are marked *