ಮುದ್ದೇಬಿಹಾಳ: ತಾಲೂಕಿನ ತಂಗಡಗಿ ವಲಯದ ರಕ್ಕಸಗಿ ಕಾರ್ಯಕ್ಷೇತ್ರದ ಭೂಮಿಕಾ ಜ್ಞಾನ ವಿಕಾಸ ಕೇಂದ್ರದಲ್ಲಿ ಮೂರು ತಿಂಗಳ ಕಾಲ ನಡೆದ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಅಥಿತಿಯಾಗಿ ಮಾತನಾಡಿದ ಶಿಕ್ಷಕಿ ಜಲಜಾಕ್ಷಿ ನಾಡಗೌಡರ ಅವರು, ಧರ್ಮಸ್ಥಳ ಸಂಸ್ಥೆ ಸಮಾಜಮುಖಿ ಕಾರ್ಯಗಳ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು. ಮಹಿಳೆಯರು ಇಂತಹ ತರಬೇತಿಗಳ ಸದುಪಯೋಗ ಪಡೆದು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಕ್ಷೇತ್ರ ಯೋಜನಾಧಿಕಾರಿ ಶಿವಾನಂದ ಪಿ. ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪೂಜ್ಯರ ಮಾರ್ಗದರ್ಶನದಲ್ಲಿ ಸಮಾಜಕ್ಕೆ ಉಪಯುಕ್ತವಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜ್ಞಾನ ವಿಕಾಸ ಕೇಂದ್ರಗಳ ಮೂಲಕ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಅವಕಾಶ ಸೃಷ್ಟಿಯಾಗುತ್ತಿದೆ , ಹೊಲಿಗೆ ತರಬೇತಿ ಮಹಿಳೆಯರಿಗೆ ಸ್ವಯಂ ಉದ್ಯೋಗದ ದಾರಿಯನ್ನು ತೆರೆದಿಡುತ್ತದೆ, ತರಬೇತಿ ಪಡೆದ ಅಭ್ಯರ್ಥಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡು, ಈ ತರಬೇತಿ ಜೀವನೋಪಾಯಕ್ಕೆ ದಾರಿದೀಪವಾಗಿದ್ದು, ಸ್ವತಃ ಬಟ್ಟೆಗಳನ್ನು ತಯಾರಿಸುವುದಕ್ಕೂ ಇತರರಿಗೆ ಹೊಲಿಗೆ ಕೆಲಸ ಮಾಡುವುದಕ್ಕೂ ಸಹಕಾರಿಯಾಗಲಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಮೂರು ತಿಂಗಳ ಕಾಲ ನಡೆದ ಈ ತರಬೇತಿಯಲ್ಲಿ 40 ಮಂದಿ ಅಭ್ಯರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದಿದ್ದು, ಕಾರ್ಯಕ್ರಮದಲ್ಲಿ ಅವರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಗಪ್ಪ ಹಿರೇಗೌಡ, ಹನುಮಂತ ಮೇಟಿ, ನಾಗಮ್ಮ ಹುಣಶ್ಯಾಳ (ಒಕ್ಕೂಟದ ಅಧ್ಯಕ್ಷರು), ಸುಮಾ (ಹೊಲಿಗೆ ತರಬೇತಿ ಶಿಕ್ಷಕಿ), ಸುಜಾತ ನಾಯಕ್ (ಜ್ಞಾನ ವಿಕಾಸ ಸಮನ್ವಯಾಧಿಕಾರಿ), ಶಂಕ್ರುಬಾಯಿ, ದೀಪ ಹಿರೇಕುಂಬ, ಅನ್ನಪೂರ್ಣ ಸೇವಾ ಪ್ರತಿನಿಧಿಗಳು ಹಾಗೂ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

