ಮುದ್ದೇಬಿಹಾಳ: ತಾಲೂಕಿನ ವಿವಿಧ ಭಾಗಗಳಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳ ಪರವಾನಿಗೆಗಳನ್ನು ರದ್ದುಗೊಳಿಸಿ, ನಿಯಮಬಾಹಿರವಾಗಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪಟ್ಟಣದ ತಹಶಿಲ್ದಾರರ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.
ವಿವಿಧ ಸಾಮಾಜಿಕ ಹಾಗೂ ದಲಿತಪರ ಸಂಘಟನೆಗಳ ಮುಖಂಡರು, ಹೋರಾಟಗಾರರು ಮತ್ತು ಸಾರ್ವಜನಿಕರು ಧರಣಿಯಲ್ಲಿ ಭಾಗವಹಿಸಿ ಮಕ್ಕಳ ಭದ್ರತೆ ಮತ್ತು ಶಿಕ್ಷಣದ ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಸರ್ಕಾರದ ನಿಯಮಾನುಸಾರ ಅನುಮತಿ ಪಡೆಯದೆ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳು ಮಕ್ಕಳ ಭವಿಷ್ಯಕ್ಕೆ ಅಪಾಯಕಾರಿಯಾಗಬಹುದು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ವಸತಿ ಶಾಲೆಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕೊರತೆ, ಸುರಕ್ಷತಾ ಕ್ರಮಗಳ ಅಭಾವ ಮತ್ತು ಶಿಕ್ಷಣದ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿವೆ. ಆದ್ದರಿಂದ ಸಂಬಂಧಿತ ಇಲಾಖೆ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಅನಧಿಕೃತ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಕುರಿತು ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಹಾಗೂ ಕಾನೂನು ಪಾಲನೆಯ ದೃಷ್ಟಿಯಿಂದ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಆಗ್ರಹಿಸಲಾಗಿದೆ. ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳದಿದ್ದರೆ ಹೋರಾಟವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಧರಣಿ ಸ್ಥಳದಲ್ಲಿ ಶಾಂತಿಯುತವಾಗಿ ಸತ್ಯಾಗ್ರಹ ಮುಂದುವರಿದಿದ್ದು, ಹೋರಾಟಗಾರರ ಆರೋಗ್ಯವನ್ನು 108 ಆಂಬುಲೆನ್ಸ್ ಸೇವಾ ಸಿಬ್ಬಂದಿ ಪರಿಶೀಲಿಸಿ ಆರೋಗ್ಯ ವಿಚಾರಿಸಿದರು. ಅಧಿಕಾರಿಗಳ ಸ್ಪಂದನೆಗಾಗಿ ಹೋರಾಟಗಾರರು ಕಾಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಬಾಲಚಂದ್ರ ಹುಲ್ಲೂರ, ಮಾರುತಿ ಸಿದ್ದಾಪೂರ, ರಾಜ್ಯ ಹೋರಾಟಗಾರರು ದುರಗಪ್ಪ ದೊಡಮನಿ, ಚಂದ್ರಶೇಖರ ಹಡಗಿನಾಳ, ಪರಸುರಾಮ ಹೊಸಮನಿ, ಸಂಗಮೇಶ ದೊಡಮನಿ, ಯಮನೂರಿ ಗುಡಿಹಾಳ, ರಾಘವೇಂದ್ರ ಮಾದರ, ಹಣಮಂತ ಶಿರೋಳ, ಪ್ರಕಾಶ ಹಾದಿಮನಿ, ಮುತ್ತಪ್ಪ ಪೂಜಾರಿ, ದೇವೇಂದ್ರ ಹೊಸಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

