ರಾಯಚೂರು ಫೆಬ್ರವರಿ 10 (ಕರ್ನಾಟಕ ವಾರ್ತೆ): ಮೂಢನಂಬಿಕೆಗಳು, ಜಾತಿ ಪದ್ಧತಿ, ಅಸಮಾನತೆಯ ವಿರುದ್ಧ ವಚನಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ, ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ಹೇಳಿದರು.
ಫೆ.10ರ ಮಂಗಳವಾರ ದಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಾಯಕ ಶರಣರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿ ಮಾರ್ಗದಿಂದ ಮುಕ್ತಿ ಸಾಧ್ಯವೆಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಚಿರಪರಿಚಿತವಾಗಿವೆ ಎಂದರು.
ಈ ವೇಳೆ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ಶರಣಪ್ಪ ಅವರು ಮಾತನಾಡಿ, ಶರಣದ ವಚನಗಳು ಇಂದಿನ ಆಧುನಿಕ ಯುಗದಲ್ಲಿ ಅತ್ಯವಶ್ಯಕವಾಗಿವೆ. ಯುವ ಪೀಳಿಗೆ ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕಿದೆ ಎಂದರು.
ಈ ವೇಳೆ ಉಪನ್ಯಾಸಕರಾಗಿ ಯುವ ಸಾಹಿತಿಗಳಾದ ಈರಣ್ಣ ಬೆಂಗಾಲಿ ಅವರು ಮಾತನಾಡಿ, 12ನೇ ಶತಮಾನವು ಧಾರ್ಮಿಕ, ಸಾಮಾಜಿಕ, ರಾಜಕೀಯವಾಗಿ ಕ್ರಾಂತಿ ಉಂಟು ಮಾಡಿದೆ. ಇವತ್ತಿನ ನಮ್ಮ ಸಂವಿಧಾನದ ಪಾರ್ಲಿಮೆಂಟ್ ಮಾದರಿಯಲ್ಲಿ ಅಂದಿನ ಅನುಭವ ಮಂಟಪ ಇತ್ತು. ಯಾರನ್ನೂ ಕೀಳಾಗಿ ಕಾಣಬಾರದು ಎಂಬುವುದು ಬಸವೇಶ್ವರರ ಸಮಾನತೆಯ ತತ್ವವಾಗಿದ್ದು, ಅವರ ಹಾದಿಯಲ್ಲಿ ನಡೆದ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರು ಶರಣ ಪಡೆಯ ಮಹನೀಯರಾಗಿದ್ದಾರೆ ಎಂದು ಹೇಳಿದರು.
ಕಾಯಕ ಶರಣರ ಭಾವಚಿತ್ರ ಮೆರವಣಿಗೆಗೆ ಚಾಲನೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಾಯಕ ಶರಣರ ಜಯಂತಿ ಅಂಗವಾಗಿ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಮತ್ತು ಉರಿಲಿಂಗ ಪೆದ್ದಿಯವರ ಭಾವಚಿತ್ರಕ್ಕೆ ರಾಯಚೂರು ತಹಶೀಲ್ದಾರ್ ಸುರೇಶ ವರ್ಮ ಅವರು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಮೆರವಣಿಗೆಯು ನಗರದ ಸಾರ್ವಜನಿಕ ಉದ್ಯಾನವನದ ಮಾರ್ಗವಾಗಿ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದವರೆಗೆ ನಡೆಯಿತು.
ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದ್ದವು.
ಇದೇ ಸಂದರ್ಭದಲ್ಲಿ ಸಮಾಜ ಮುಖಂಡರಾದ ರಾಜು, ಭೀಮಣ್ಣ, ಯಮೂನಪ್ಪ, ಹನುಮಂತು, ವೇಣುಗೋಪಾಲ, ಹನುಮಂತಪ್ಪ ಮನ್ನಾಪುರಿ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *