ಲಿಂಗಸುಗೂರು : ಪಟ್ಟಣದಿಂದ ಸಿಂಧನೂರಿಗೆ ಕೃಷಿ ಉಪ ನಿರ್ದೇಶಕರ ಕಚೇರಿ ಸ್ಥಳಾಂತರ ವಿರೋಧಿಸಿ ಕೃಷಿ ಕಚೇರಿ ಮುಂದೆ ಸೋಮವಾರ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ಧರಣಿ ಆರಂಭಿಸಿದರು. ಲಿಂಗಸುಗೂರು ಕೃಷಿ ಉಪನಿರ್ದೇಶಕರ ಕಚೇರಿ ಸಿಂಧನೂರಿಗೆ ಸ್ಥಳಾಂತರ ಮಾಡಿ, 2024ರ ಅಗಸ್ಟ್19ರಂದು ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು. ಈಗ ಮತ್ತೆ ಕೃಷಿ ಉಪನಿರ್ದೇಶಕರು ಬೆಂಗಳೂರು ಇವರು, ಇಲ್ಲಿನ ಕೃಷಿ ಉಪನಿರ್ದೇಶಕರ ಕಚೇರಿ-2 ಹುದ್ದೆಗಳ ಸಮೇತ ಸ್ಥಳಾಂತರ ಮಾಡುವಂತೆ ಆದೇಶಿಸಿರುವುದು ಖಂಡನೀಯ, ಲಿಂಗಸುಗೂರು ಸಿಂಧನೂರಿನಿಂದ 90 ಕಿ.ಮೀ. ಅಂತರವಿದ್ದು, ತಾಲೂಕಿನಲ್ಲಿ ಹೆಚ್ಚು ಕೃಷಿ ಭೂಮಿ ಇದೆ ಎಂದು ಸರಕಾರಕ್ಕೆ ಸುಳ್ಳು ಮಾಹಿತಿ ನೀಡಿ ಕಚೇರಿ ಸ್ಥಳಾಂತರಕ್ಕೆ ಹುನ್ನಾರ ನಡೆದಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಗುತ್ತಿಲ್ಲ. ನಿರಂತರವಾಗಿ ನಡೆಯುವ ಹೋರಾಟ ಸರಕಾರದಿಂದ ಆದೇಶ ಬರುವವರೆಗೂ ನಿಲ್ಲುವುದಿಲ್ಲ ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ, ತಾಲೂಕ ಅಧ್ಯಕ್ಷ ದುರ್ಗಾಪ್ರಸಾದ, ಮುಖಂಡರಾದ ಮಹ್ಮದ್ ಖಾಜಾಸಾಬ, ದುರುಗಪ್ಪ, ಬಸಣ್ಣ ಕೋಠ, ಲಾಲ್‌ಸಾಬ, ಲಕ್ಷ್ಮಣ, ರಮೇಶ, ಮಹಾಂತೇಶ ಸೇರಿ ಇತರರಿದ್ದರು.
