ತಾಳಿಕೋಟಿ: ಭಾರತ ಇಡೀ ವಿಶ್ವದಲ್ಲಿಯೇ ಶ್ರೀಮಂತ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಹೊಂದಿದ ರಾಷ್ಟ್ರವಾಗಿದೆ. ಭಾರತ ಹಬ್ಬಗಳ ದೇಶವಾಗಿದ್ದು ನಮ್ಮ ಗ್ರಾಮೀಣ ಭಾಗದಲ್ಲಿ ಆಚರಿಸುವ ಹಬ್ಬ ಹಾಗೂ ಜಾತ್ರೆಗಳು ಕೇವಲ ಸಂಪ್ರದಾಯ ವಾಗಿರದೆ ಗ್ರಾಮೀಣ ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿವೆ ಎಂದು ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ(ನಡಹಳ್ಳಿ) ಹೇಳಿದರು. ಶುಕ್ರವಾರ ತಾಲೂಕಿನ ಸುಕ್ಷೇತ್ರ ಹಡಗಿನಾಳ ಗ್ರಾಮದ ಶ್ರೀ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ “ಮಾತು ಬಿದ್ದಿತು ಮೌನ ಗೆದ್ದಿತು” ನಾಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿರುವ ನಮ್ಮ ತಾಯಂದಿರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರಗಳನ್ನು ಕೊಡಲು ಪ್ರಯತ್ನಿಸಬೇಕು ಸಂಸ್ಕಾರಯುತ ವ್ಯಕ್ತಿ ಮಾತ್ರ ದೇಶದ ಒಳ್ಳೆಯ ಪ್ರಜೆ ಆಗಲು ಸಾಧ್ಯ ಎಂದರು. ಪುರಸಭೆ ಮಾಜಿ ಸದಸ್ಯ ಪ್ರಭುಗೌಡ ಮದರಕಲ್ಲ ಮಾತನಾಡಿ 9 ವರ್ಷಗಳ ನಂತರ ಗ್ರಾಮದಲ್ಲಿ ಎಲ್ಲರೂ ಒಂದಾಗಿ ಈ ಜಾತ್ರೆಯನ್ನು ಆಚರಿಸುತ್ತಿರುವುದು ಸಂತಸದ ವಿಷಯ ಇದನ್ನು ಮುಂದುವರೆಸಿಕೊಂಡು ಹೋಗಬೇಕು. ನಾಟಕಗಳನ್ನು ಕೇವಲ ಮನೋರಂಜನೆಗಾಗಿ ನೋಡದೆ ಅದರ ತಿರುಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದರು. ಉಪನ್ಯಾಸಕ ಮಲ್ಲಿಕಾರ್ಜುನ ದೇಶಮಾನ್ಯ ಅವರು ಹಡಗಿನಾಳ ಐತಿಹಾಸಿಕ ಹಿನ್ನೆಲೆ ಇರುವ ಗ್ರಾಮ, ಇಲ್ಲಿ ಬಹಳಷ್ಟು ಅಭಿವೃದ್ಧಿಯ ಕಾರ್ಯಗಳು ಆಗಬೇಕಾಗಿದೆ. ಗ್ರಾಮದಲ್ಲಿ ಶಾಲೆ ಇದೆಯಾದರೂ ಕೋಣೆಗಳ ಸಮಸ್ಯೆ ಇದೆ ನಮ್ಮ ಪ್ರತಿನಿಧಿಗಳು ಇದರ ಕುರಿತು ಗಮನ ಹರಿಸಬೇಕು. ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಟ್ಟು ಕೆಲಸ ಮಾಡಬೇಕಾಗಿದೆ, ಎಲ್ಲರೂ ಒಂದಾಗಿ ಈ ಜಾತ್ರೆಯನ್ನು ಆಚರಿಸುತ್ತಿದ್ದೇವೆ ಇದನ್ನು ಮುಂದಿರಿಸಿಕೊಂಡು ಹೋಗೋಣ ಎಂದರು. ಕಾರ್ಯಕ್ರಮದಲ್ಲಿ ಮುಖಂಡರಾದ ಶಿವರಾಜ ಗುಂಡಕನಾಳ, ವೀರೇಶ ಬಾಗೇವಾಡಿ, ಬಸವರಾಜ ಕುಂಬಾರ, ಸಂಗನಗೌಡ ಅಸ್ಕಿ, ಸಂಗಮೇಶ ದೇಸಾಯಿ, ಮಲ್ಲಿಕಾರ್ಜುನ ಮದರಕಲ್, ಮಹಾದೇವಪ್ಪಗೌಡ ದೇಸಾಯಿ, ಶಿವಕುಮಾರ ದೇಶಮಾನ್ಯ,ಕಾಶಿನಾಥ ದೇಸಾಯಿ, ಶಾಂತಗೌಡ ದೇಸಾಯಿ, ಗೌಡಪ್ಪಗೌಡ ದೇಸಾಯಿ, ಚನ್ನಪ್ಪಗೌಡ ದೇಸಾಯಿ, ನಿಂಗನಗೌಡ ದೇಸಾಯಿ, ಸಿಂಧೂರಲಕ್ಷ್ಮಣ ವಾಲೀಕಾರ ಮತ್ತಿತರರು ಇದ್ದರು. ಐಶ್ವರ್ಯ ದೇಶಮಾನ್ಯ ಪ್ರಾರ್ಥಿಸಿದರು.ಭಾಗ್ಯಾ ತಾಳಿಕೋಟಿ ಭಕ್ತಿ ಗೀತೆ ಹಾಡಿದರು. ಶಿವಕುಮಾರ ದೇಶಮಾನ್ಯ ನಿರೂಪಿಸಿದರು. ಶಿಕ್ಷಕಿ ವಿದ್ಯಾಶ್ರೀ ಡಿ.ವಂದಿಸಿದರು.

