ಮೈಲಾಪುರ: ಕಾರಟಗಿ ತಾಲೂಕಿನ ಮೈಲಾಪುರ ಗ್ರಾಮದ ಹೆಮ್ಮೆಯ ಪುತ್ರರಾದ ವೀರಯೋಧ ಅವಲ್ದಾರ ಶ್ರೀ ವೀರೇಶ್ ಗಾದಿಗನೂರ್ (ತಂದೆ: ಪಂಪನಗೌಡ ಗಾದಿಗನೂರ್) ಅವರು ದೇಶಸೇವೆಯಿಂದ ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ಸಮಸ್ತ ಗ್ರಾಮಸ್ಥರ ಸಹಕಾರದಿಂದ ಅದ್ದೂರಿ ಸ್ವಾಗತ ಮತ್ತು ಗೌರವ ಸಮಾರಂಭವನ್ನು ವೈಭವದಿಂದ ಆಯೋಜಿಸಲಾಯಿತು.

ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಕಲ್ಲಿನಾಥ ದೇವಸ್ಥಾನದವರೆಗೆ ಭಾರೀ ಜನಸಾಗರದೊಂದಿಗೆ ನಡೆಯಿತು. ಡೊಳ್ಳು-ವಾದ್ಯಗಳು, ಘೋಷಣೆಗಳು, ಹೂಮಾಲೆ ಹಾಗೂ ಪಟಾಕಿಗಳೊಂದಿಗೆ ವೀರಯೋಧನಿಗೆ ಜನರು ಗೌರವ ಸಲ್ಲಿಸಿದರು. ಮೆರವಣಿಗೆಯ ನಂತರ ಕಲ್ಲಿನಾಥ ದೇವಸ್ಥಾನದ ಪಕ್ಕದಲ್ಲಿ ಬೃಹತ್ ವೇದಿಕೆ ಕಾರ್ಯಕ್ರಮವನ್ನು ಅತ್ಯಂತ ಸಡಗರದಿಂದ ಜರುಗಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಲಕನಮಠ ಕಾರಟಗಿಯ ವೇದಮೂರ್ತಿ ಶ್ರೀ ವೀರಭದ್ರಯ್ಯ ಸ್ವಾಮಿಗಳು, ಬೇವಿನಾಳ–ಮೈಲಾಪುರ ಹಿರೇಮಠದ ಶ್ರೀ ವೇದಮೂರ್ತಿ ನಿಜಗುಣಾನಂದ ಸ್ವಾಮೀಜಿಗಳು, ಅಮರಯ್ಯ ತಾತನವರು ಹಾಗೂ ಪಂಪಯ್ಯ ಸಿದ್ದಲಿಂಗಯ್ಯ ಸ್ವಾಮೀಜಿಗಳು ಉಪಸ್ಥಿತರಿದ್ದು ವೀರಯೋಧನಿಗೆ ಆಶೀರ್ವಚನ ನೀಡಿದರು.

ಸ್ವಾಮೀಜಿಗಳು ಮಾತನಾಡಿ,

“ದೇಶದ ಗಡಿಗಳಲ್ಲಿ ಪ್ರಾಣಪಣ ತೊಟ್ಟು ಸೇವೆ ಸಲ್ಲಿಸುವ ಸೈನಿಕರು ನಮ್ಮ ನಿಜವಾದ ನಾಯಕರು. ಇಂತಹ ವೀರರನ್ನು ಗೌರವಿಸುವ ಸಂಸ್ಕಾರ ಗ್ರಾಮಗಳಲ್ಲಿ ಉಳಿಯಬೇಕು” ಎಂದು ಹೇಳಿದರು.

ವೇದಿಕೆಯಲ್ಲಿ ಮಾತನಾಡಿದ ಗಣ್ಯರು, ವೀರೇಶ್ ಗಾದಿಗನೂರ್ ಅವರು ಯುದ್ಧಭೂಮಿಯಲ್ಲಿ ಹಾಗೂ ದೇಶದ ಭದ್ರತೆಗೆ ಸಲ್ಲಿಸುತ್ತಿರುವ ಸೇವೆ, ಶಿಸ್ತು, ತ್ಯಾಗ ಮತ್ತು ಧೈರ್ಯವನ್ನು ವಿವರಿಸಿ ಜನರಿಗೆ ಸೈನಿಕರ ಕರ್ತವ್ಯದ ಮಹತ್ವವನ್ನು ಪರಿಚಯಿಸಿದರು. ಯುವಜನತೆ ದೇಶಸೇವೆಯತ್ತ ಪ್ರೇರಿತರಾಗಬೇಕೆಂದು ಕರೆ ನೀಡಲಾಯಿತು.

ಕಾರ್ಯಕ್ರಮದ ನಿರೂಪಣೆಯನ್ನು ಅಮರೇಶ್ ಶಿಕ್ಷಕರು (ಮೈಲಾಪುರ) ಸೊಗಸಾಗಿ ನಡೆಸಿಕೊಟ್ಟರು. ವೇದಿಕೆಯಲ್ಲಿ ವೀರನಗೌಡ ಮಾಲಿಪಾಟೀಲ್, ಅಮರೇಗೌಡ ಮಾಲಿಪಾಟೀಲ್, ತಿರುಪತಿ ಗುಡದಾಳ, ಅನ್ನದಾನ ಗೌಡ, ಪೊಲೀಸ್ ಪಾಟೀಲ್, ಡಾ. ದೇವೇಂದ್ರಪ್ಪ ಬೊಮ್ಮನಾಳ, ಶರಣಪ್ಪ ದಾಸನಾಳ, ದೊಡ್ಡಬಸವ ಗೋಡಿನಾಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಸಮಸ್ತ ಊರಿನ ಗ್ರಾಮಸ್ಥರು, ಹಿರಿಯರು, ಮಹಿಳೆಯರು ಹಾಗೂ ಯುವಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ ವೀರಯೋಧನಿಗೆ ಹಾರ್ದಿಕ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮ ಮೈಲಾಪುರ ಗ್ರಾಮಕ್ಕೆ ಹೆಮ್ಮೆ ತಂದ ಐತಿಹಾಸಿಕ ಕ್ಷಣವಾಗಿ ಉಳಿಯಿತು.

Leave a Reply

Your email address will not be published. Required fields are marked *