ಸುರಪುರ ತಾಲೂಕಿನ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾದ ಐತಿಹಾಸಿಕ ಸುಕ್ಷೇತ್ರ ತಿಂಥಣಿ ಶ್ರೀ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವವು ಭಕ್ತಿಭಾವ, ಸಂಸ್ಕೃತಿ ಹಾಗೂ ಸಮಾಜಸೇವೆಯ ಸಂದೇಶದೊಂದಿಗೆ ಅದ್ಧೂರಿಯಾಗಿ ನಡೆಯಿತು. ಈ ಮಹೋತ್ಸವದ ಅಂಗವಾಗಿ ವಿಶ್ವಕರ್ಮ ಸಮಾಜದ ಧೀಮಂತ ನಾಯಕರು, ಹುಟ್ಟುಹೋರಾಟಗಾರರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಕೆ.ಪಿ. ನಂಜುಂಡಿ ಸರ್ ಅವರು ತಿಂಥಣಿ ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಮೌನೇಶ್ವರರ ದರ್ಶನ ಪಡೆದರು.

ಈ ವೇಳೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವಿಶ್ವಕರ್ಮ ಸಮಾಜದ ಮುಖಂಡರು, ಪದಾಧಿಕಾರಿಗಳು, ಹಿರಿಯರು, ಯುವಕರು ಹಾಗೂ ಅಪಾರ ಸಂಖ್ಯೆಯ ಭಕ್ತರು ಜೈಘೋಷಗಳೊಂದಿಗೆ ಅವರನ್ನು ಭವ್ಯವಾಗಿ ಸ್ವಾಗತಿಸಿದರು. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು, ಪೂಜೆಗಳು, ಭಜನೆ ಮತ್ತು ಪ್ರವಚನಗಳು ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹ ತುಂಬಿದವು.

ದರ್ಶನ ನಂತರ ಸನ್ಮಾನ್ಯ ಕೆ.ಪಿ. ನಂಜುಂಡಿ ಸರ್ ಅವರು ದೇವಸ್ಥಾನ ಸುತ್ತಮುತ್ತಲ ಪ್ರದೇಶ ಹಾಗೂ ಹೊಳೆಯ ದಡವನ್ನು ವೀಕ್ಷಿಸಿದರು. ಈ ವೇಳೆ ಸ್ವಚ್ಛತೆ ಕಾಪಾಡುವಲ್ಲಿ ಅಗತ್ಯ ಕ್ರಮಗಳ ಕೊರತೆ, ಕಸ ವಿಲೇವಾರಿ ವ್ಯವಸ್ಥೆಯ ಅಭಾವ, ಭಕ್ತರಿಗೆ ವಿಶೇಷವಾಗಿ ಮಹಿಳೆಯರಿಗೆ ಅಗತ್ಯವಾದ ಸ್ನಾನಗೃಹ ಮತ್ತು ಶೌಚಾಲಯಗಳ ವ್ಯವಸ್ಥೆ ಇಲ್ಲದಿರುವುದು ಗಮನಕ್ಕೆ ಬಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಂತಹ ಮಹತ್ವದ ಪುಣ್ಯಕ್ಷೇತ್ರದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇರುವುದು ವಿಷಾದಕರ ಸಂಗತಿ ಎಂದು ಅಭಿಪ್ರಾಯಪಟ್ಟರು.

ಇದೇವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಂಥಣಿ ಶ್ರೀ ಮೌನೇಶ್ವರ ಕ್ಷೇತ್ರವು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ, ಇದು ವಿಶ್ವಕರ್ಮ ಸಮಾಜದ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯ ಜೀವಂತ ಪ್ರತೀಕವಾಗಿದೆ. ಇಂತಹ ಪುಣ್ಯಕ್ಷೇತ್ರವನ್ನು ಸರ್ಕಾರ ವಿಶೇಷ ಯೋಜನೆಯಡಿ ಗುರುತಿಸಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಅವರು ಮುಂದುವರೆದು ಮಾತನಾಡುತ್ತಾ,

ದೇವಸ್ಥಾನ, ಜಾತ್ರಾ ಪ್ರದೇಶ ಹಾಗೂ ಹೊಳೆಯ ದಡದಲ್ಲಿ ಶಾಶ್ವತ ಸ್ವಚ್ಛತಾ ವ್ಯವಸ್ಥೆ ರೂಪಿಸಬೇಕು

ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಸ್ನಾನಗೃಹ, ಶೌಚಾಲಯ, ವಿಶ್ರಾಂತಿ ಮಂದಿರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು

ಭಕ್ತರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ರಸ್ತೆ, ಬೆಳಕು ಮತ್ತು ಭದ್ರತಾ ವ್ಯವಸ್ಥೆಗಳನ್ನು ಬಲಪಡಿಸಬೇಕು

ತಿಂಥಣಿ ಶ್ರೀ ಮೌನೇಶ್ವರ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕವಾಗಿ ‘ತಿಂಥಣಿ ಮೌನೇಶ್ವರ ಅಭಿವೃದ್ಧಿ ಪ್ರಾಧಿಕಾರ’ ಸ್ಥಾಪನೆ ಮಾಡಬೇಕು

ಎಂದು ಸರ್ಕಾರವನ್ನು ಆಗ್ರಹಿಸಿದರು.

ಸಮಾಜದ ಬಂಧುಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಪುಣ್ಯಕ್ಷೇತ್ರಗಳು ಮತ್ತು ದೇವಸ್ಥಾನಗಳ ಸಂರಕ್ಷಣೆ ಸರ್ಕಾರದ ಜೊತೆಗೆ ಸಮಾಜದ ಜವಾಬ್ದಾರಿಯೂ ಹೌದು. ಸರ್ಕಾರದಿಂದ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ನಾವುಗಳೆಲ್ಲರೂ ಒಗ್ಗಟ್ಟಾಗಿ ಸಂಘಟಿತರಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಕರೆ ನೀಡಿದರು. ಸಮಾಜದ ಸಂಘಟನೆ, ಏಕತೆ ಮತ್ತು ಶಕ್ತಿಯೇ ಅಭಿವೃದ್ಧಿಗೆ ಮೂಲವೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಅನೇಕ ಗಣ್ಯರು, ವಿವಿಧ ಜಿಲ್ಲೆಗಳ ಪದಾಧಿಕಾರಿಗಳು, ಸ್ಥಳೀಯ ಮುಖಂಡರು, ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದು, ಸನ್ಮಾನ್ಯ ಕೆ.ಪಿ. ನಂಜುಂಡಿ ಸರ್ ಅವರ ಅಭಿಪ್ರಾಯಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಜಾತ್ರಾ ಮಹೋತ್ಸವವು ಧಾರ್ಮಿಕ ಆಚರಣೆಗಳ ಜೊತೆಗೆ ಸಮಾಜ ಜಾಗೃತಿ ಮತ್ತು ಅಭಿವೃದ್ಧಿಯ ಸಂದೇಶ ನೀಡುವ ವೇದಿಕೆಯಾಗಿದ್ದು ಎಲ್ಲರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿತು.

Leave a Reply

Your email address will not be published. Required fields are marked *