ವಿಜಯಪುರ ನಗರದ ದರ್ಬಾರ್ ಶಾಲಾ ಆವರಣದಲ್ಲಿ ಫೆಬ್ರವರಿ 2ರಂದು ನಡೆಯಲಿರುವ ಉದ್ಯೋಗ ಮೇಳದ ಪೂರ್ವ ಸಿದ್ಧತೆಯನ್ನು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಕಾಂತ ನಾಯಕ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸ್ನೇಹಿಲ್ ಆರ್., ಜಿಲ್ಲಾಧಿಕಾರಿಗಳಾದ ಡಾ.ಆನಂದ ಕೆ. ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಾದ ರಿಷಿ ಆನಂದ ಅವರು ಸ್ಥಳಕ್ಕೆ ಭೇಟಿ ನೀಡಿ ರವಿವಾರ ಪರಿಶೀಲನೆ ನಡೆಸಿದರು.ಉದ್ಯೋಗ ಮೇಳಕ್ಕೆ ವೇದಿಕೆ, ಅಭ್ಯರ್ಥಿಗಳ ಸಂದರ್ಶನ ನಡೆಯುವ ಕೊಠಡಿಗಳ ವ್ಯವಸ್ಥೆ ಸೇರಿದಂತೆ ವ್ಯವಸ್ಥಿತವಾಗಿ ಉದ್ಯೋಗ ಮೇಳಕ್ಕೆ ಕಲ್ಪಿಸಲಾಗಿರುವ ಅಗತ್ಯ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಉದ್ಯೋಗ ಮೇಳಕ್ಕೆ ಆಗಮಿಸುವ ಉದ್ಯೋಗಾಕಾಂಕ್ಷಿಗಳಿಗೆ ಯಾವುದೇ ಗೊಂದಲವಾಗದಂತೆ ನೋಡಿಕೊಳ್ಳಬೇಕು. ಅಭ್ಯರ್ಥಿಗಳು ಸುಗಮವಾಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ, ಸಂದರ್ಶನದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು. ಅತ್ಯಂತ ವ್ಯವಸ್ಥಿತ ಹಾಗೂ ಯಶಸ್ವಿ ಉದ್ಯೋಗ ಮೇಳ ಆಯೋಜನೆಗೆ ಸ್ಪಷ್ಟ ಮಾರ್ಗದರ್ಶನ ನೀಡಿದ ಅವರು, ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.ಉದ್ಯೋಗ ಮೇಳದ ಯಶಸ್ಸಿಗಾಗಿ ಎಲ್ಲ ಇಲಾಖೆಗಳ ಸಹಕಾರದಿಂದ ಸಕಲ ಸಿದ್ಧತೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಸೂಚಿಸಲಾಯಿತು.ಈ ಸಂದರ್ಭದಲ್ಲಿ ಸಿಡಾಕ್ ಜಂಟಿ ನಿರ್ದೇಶಕರಾದ ಸುಪ್ರಿಯಾ ಬಳ್ಳಾರಿ, ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ರಾಹುಲ ಭಾವಿದೊಡ್ಡಿ, ಎನ್‌ಐಸಿ ಅಧಿಕಾರಿ ಶಿವಾನಂದ ಗೂಗವಾಡ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಬಾಗಲಕೋಟೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳಾದ ಗುರುಪಾದಯ್ಯ ಹಿರೇಮಠ, ಮಹೇಶ ಮಾಳವಾಡಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *