ರೈಲ್ವೆಗೆ ದಾಖಲಾರ್ಹ ಅನುದಾನ ನೀಡಿರುವ ಬಜೆಟ್ ಸ್ವಾಗತಾರ್ಹ: ಡಾ. ಬಾಬುರಾವ್

ರಾಯಚೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ೨೦೨೬–೨೭ನೇ ಸಾಲಿನ ಕೇಂದ್ರ ಆಯ-ವ್ಯಯದಲ್ಲಿ ರೈಲ್ವೆ ಇಲಾಖೆಗೆ ದಾಖಲಾರ್ಹ ಅನುದಾನ ನೀಡಿರುವುದು ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಬಲ ತುಂಬುವ ಹೆಜ್ಜೆಯಾಗಿದೆ ಎಂದು ರೈಲ್ವೆ ಸಲಹಾ ಮಂಡಳಿಯ ಮಾಜಿ ಸದಸ್ಯರಾದ ಡಾ. ಬಾಬುರಾವ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರೈಲ್ವೆ ಇಲಾಖೆಗೆ ರೂ. ೨.೯೩ ಲಕ್ಷ ಕೋಟಿ ಅನುದಾನ ಒದಗಿಸಿರುವುದು ಇತಿಹಾಸಾತ್ಮಕ ನಿರ್ಧಾರವಾಗಿದ್ದು, ಇದರ ಮೂಲಕ ಹೊಸ ರೈಲು ಮಾರ್ಗಗಳು, ವೇಗದ ರೈಲು ಸೇವೆಗಳು ಹಾಗೂ ಸುರಕ್ಷತಾ ವ್ಯವಸ್ಥೆಗಳ ಬಲವರ್ಧನೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.ಇದಲ್ಲದೆ, ೭ ಹೊಸ ಸೂಪರ್ ಫಾಸ್ಟ್ ರೈಲುಗಳನ್ನು ಆರಂಭಿಸುವ ಘೋಷಣೆ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ. ಈ ಪೈಕಿ ಎರಡು ಸೂಪರ್ ಫಾಸ್ಟ್ ರೈಲುಗಳು ಕರ್ನಾಟಕ ರಾಜ್ಯಕ್ಕೆ ಲಭಿಸಿರುವುದು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಕ್ಕೂ ಈ ಯೋಜನೆಗಳಲ್ಲಿ ಪಾಲು ಸಿಕ್ಕಿರುವುದು ಈ ಭಾಗದ ಜನರಿಗೆ ಸಂತಸದ ವಿಚಾರವಾಗಿದೆ ಎಂದು ಹೇಳಿದರು.“ಕರ್ತವ್ಯ ಮಂತ್ರದೊಂದಿಗೆ ದೇಶವನ್ನು ವಿಕಸಿತ ರಾಷ್ಟ್ರದ ದಿಕ್ಕಿನಲ್ಲಿ ಮುನ್ನಡೆಸುವ ಗುರಿಯನ್ನು ಹೊಂದಿರುವ ಈ ಬಜೆಟ್ ಸಂಪೂರ್ಣವಾಗಿ ಅಭಿವೃದ್ಧಿಪರವಾಗಿದೆ. ರೈಲ್ವೆ ವಿಸ್ತರಣೆ ಮೂಲಕ ವ್ಯಾಪಾರ, ಕೈಗಾರಿಕೆ ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ” ಎಂದು ಡಾ. ಬಾಬುರಾವ್ ತಿಳಿಸಿದರು.ಇನ್ನು ಬಜೆಟ್‌ನ ಇತರೆ ಅಂಶಗಳ ಕುರಿತು ಮಾತನಾಡಿದ ಅವರು,ವಿದೇಶಗಳಿಗೆ ಪ್ರಯಾಣಿಸುವ ಭಾರತೀಯರ ಮೇಲಿನ ತೆರಿಗೆಯನ್ನು ೨ ಶೇಕಡಾ ಕಡಿಮೆ ಮಾಡಿರುವುದು, ಮಾರ್ಚ್ ೩೧ರವರೆಗೆ ತೆರಿಗೆ ಸಲ್ಲಿಕೆಗೆ ಅವಕಾಶ ಕಲ್ಪಿಸಿರುವುದು ಮಧ್ಯಮ ವರ್ಗ ಮತ್ತು ಸಾಮಾನ್ಯ ಜನರಿಗೆ ದೊಡ್ಡ ನಿರಾಳತೆ ನೀಡಿದೆ ಎಂದು ಹೇಳಿದರು.ಅದೇ ರೀತಿ, ಬೆಂಗಳೂರು–ಹೈದರಾಬಾದ್ ಮತ್ತು ಬೆಂಗಳೂರು–ಚೆನ್ನೈ ಹೈ ಸ್ಪೀಡ್ ಕಾರಿಡಾರ್‌ಗಳ ಘೋಷಣೆ ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ದಿಕ್ಕು ನೀಡಲಿದ್ದು, ದಕ್ಷಿಣ ಭಾರತದ ನಗರಗಳ ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ಅಭಿಪ್ರಾಯಪಟ್ಟರು.ಸಿಗರೇಟ್ ಹಾಗೂ ಔಷಧಗಳ ಮೇಲಿನ ತೆರಿಗೆ ಕಡಿತ ಜನಸಾಮಾನ್ಯರ ಮೇಲಿನ ಆರ್ಥಿಕ ಭಾರವನ್ನು ಇಳಿಸುವ ಕ್ರಮವಾಗಿದ್ದು, ಇದು ಬಡವರು ಮತ್ತು ಮಧ್ಯಮ ವರ್ಗದ ಪರವಾದ ಬಜೆಟ್ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಹೇಳಿದರು.ಒಟ್ಟಾರೆ, ಈ ಬಜೆಟ್ ಜನಪರ, ಅಭಿವೃದ್ಧಿಪರ ಮತ್ತು ಆಶಾದಾಯಕವಾಗಿದ್ದು, ವಿಕಸಿತ ಭಾರತ ನಿರ್ಮಾಣದ ದಾರಿಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಡಾ. ಬಾಬುರಾವ್ ಸಂತಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *