ರೈತರ ಜೀವನಾಡಿಯಾದ ತುಂಗಭದ್ರ ಜಲಾಶಯಕ್ಕೆ ಇಂದು ರೈತಪರ ಚಿಂತಕ ಹಾಗೂ ನೆಚ್ಚಿನ ಶಾಸಕರಾದ ಹಂಪನಗೌಡ ಬಾದರ್ಲಿ ಅವರು ಭೇಟಿ ನೀಡಿ, ಜಲಾಶಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಗೆಟ್ ಕಾಮಗಾರಿಯನ್ನು ಸ್ಥಳದಲ್ಲೇ ವೀಕ್ಷಿಸಿದರು.
ಜಲಾಶಯದ ಸುರಕ್ಷತೆ, ನೀರಿನ ಸಮರ್ಪಕ ನಿರ್ವಹಣೆ ಹಾಗೂ ರೈತರ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಕಾಮಗಾರಿ ಅತ್ಯಂತ ಮಹತ್ವದ್ದಾಗಿದ್ದು, ಕಾಮಗಾರಿಯ ಪ್ರಗತಿ, ತಾಂತ್ರಿಕ ಅಂಶಗಳು ಹಾಗೂ ಪೂರ್ಣಗೊಳ್ಳುವ ಅವಧಿ ಕುರಿತು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು. ಕಾಮಗಾರಿಯಲ್ಲಿ ಯಾವುದೇ ಲೋಪದೋಷಗಳಿಲ್ಲದೆ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಸವರಾಜ ಹಿರೇಗೌಡ್ರು, ರೈತ ಮುಖಂಡರಾದ ಸಣ್ಣ ಬಿಮನಗೌಡ್ರು ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದು, ಜಲಾಶಯಕ್ಕೆ ಸಂಬಂಧಿಸಿದ ರೈತರ ಸಮಸ್ಯೆಗಳು, ನೀರು ಬಿಡುಗಡೆ ವೇಳಾಪಟ್ಟಿ ಹಾಗೂ ಭವಿಷ್ಯದಲ್ಲಿನ ನೀರಿನ ಭದ್ರತೆ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಶಾಸಕರು ರೈತರ ಮಾತುಗಳನ್ನು ಆಲಿಸಿ, ಅವರ ಹಿತಸಾಧನೆಗೆ ಸದಾ ಬದ್ಧನಾಗಿರುವುದಾಗಿ ಭರವಸೆ ನೀಡಿದರು.
ತುಂಗಭದ್ರ ಜಲಾಶಯ ಈ ಭಾಗದ ಕೃಷಿಗೆ ಜೀವಾಳವಾಗಿದ್ದು, ಇದರ ಸಮರ್ಪಕ ನಿರ್ವಹಣೆ ಮೂಲಕ ರೈತರ ಬದುಕು ಸುಧಾರಿಸಲು ಸರ್ಕಾರ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಶಾಸಕರು ಹೇಳಿದರು.

Leave a Reply

Your email address will not be published. Required fields are marked *