ರಾಯಚೂರು ಫೆಬ್ರವರಿ 01 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಅಂಗವಾಗಿ ಜಿಲ್ಲಾಡಳಿತ ರೂಪಿಸಿರುವ ಜ್ಯೋತಿ ರಥಯಾತ್ರೆಗೆ ಫೆಬ್ರವರಿ 01ರಂದು ಚಾಲನೆ ಸಿಕ್ಕಿತು.
ನಗರದ ಐತಿಹಾಸಿಕ ಕರ್ನಾಟಕ ಸಂಘದ ಆವರಣದಿಂದ ರಥಯಾತ್ರೆ ಆರಂಭಗೊಂಡಿತು.
ರಥಯಾತ್ರೆ ಚಾಲನೆ ಹಿನ್ನೆಲೆಯಲ್ಲಿ ಕರ್ನಾಟಕ ಸಂಘದ ಆವರಣದಲ್ಲಿ ಬೆಳಗ್ಗೆ ಹಬ್ಬದ ಸಂಭ್ರಮ ಕಂಡು ಬಂದಿತು.
ಹೂವು, ತಳಿರು ತೋರಣಗಳಿಂದ ಶೃಂಗರಿಸಿದ್ದ ರಥವು ಗಮನ ಸೆಳೆಯಿತು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಒಂದೇ ಬಣ್ಣದ ಸೀರೆ ಧರಿಸಿ ಆಗಮಿಸಿ ಕಾರ್ಯಕ್ರಮದ ಕಳೆ ಹೆಚ್ಚಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಈ ರಥಯಾತ್ರೆಗೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರು ಚಾಲನೆ ನೀಡಿದರು.
ಜಿಲ್ಲಾಡಳಿತದ ಸೂಚನೆ ಹಿನ್ನೆಲೆ, ರಜೆ ದಿನವಾದ ಭಾನುವಾರವೂ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ತಮ್ಮತಮ್ಮ ಕಚೇರಿಯ ಸಿಬ್ಬಂದಿಯೊಂದಿಗೆ ಆಗಮಿಸಿದ್ದರು.
ಜ್ಯೋತಿ ರಥಯಾತ್ರೆ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಥಯಾತ್ರೆಯನ್ನು ಯಶಸ್ವಿಗೊಳಿಸಿದರು.
ನಗರದ ಪ್ರಯುಖ ರಸ್ತೆಗಳಲ್ಲಿ ಜಾಥಾ: ನಗರದ ಬಂಗಾರ ಬಜಾರ್, ಸದರ್ ಬಜಾರ್, ಹಳೆ ನಗರಸಭೆ ಕಚೇರಿ ಮುಂಭಾಗ, ಕೇಂದ್ರ ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಬಸವೇಶ್ವರ ವೃತ್ತದ ಮೂಲಕ ಮಾನವಿಯತ್ತ ಹೊರಟಿತು.
ಈ ಜ್ಯೋತಿ ರಥಯಾತ್ರೆಯು ಮಾನವಿ, ಸಿಂಧನೂರ, ಮಸ್ಕಿ, ಲಿಂಗಸೂರು, ಕವಿತಾಳ, ದೇವದುರ್ಗ, ಗಬ್ಬೂರ, ಅರಕೇರಾ, ಸಿರವಾರ ಸೇರಿದಂತೆ ಫೆ.5ರವರೆಗೆ ಜಿಲ್ಲೆಯಾದ್ಯಂತ ಬೇರೆ ಕಡೆಗಳಲ್ಲಿ ಸಂಚರಿಸಲಿದೆ.
ಇದೇ ಸಂದರ್ಭದಲ್ಲಿ ರಾಯಚೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪವನ್ ಕಿಶೋರ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಕೃಷ್ಣ ಶಾವಂತಗೇರಿ, ಉಪ ಆಯುಕ್ತರಾದ ಸಂತೋಷ ರಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಸುರೇಂದ್ರ ಬಾಬು, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಜಯಪ್ರಕಾಶ್ ಚವ್ಹಾಣ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸಿಂಧು ಆರ್. ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ರಾಯಚೂರು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಮುಖಂಡರಾದ ರವಿ ಭೋಸರಾಜು, ಜಯವಂತರಾವ್ ಪತಂಗೆ, ಕೆ.ಶಾಂತಪ್ಪ, ರವಿ ಜಲ್ದಾರ್ ಸೇರಿದಂತೆ ವಿವಿಧ ದಿನಾಚರಣೆಗಳ ಆಚರಣಾ ಸಮಿತಿಯ ಸದಸ್ಯರು ಕೂಡ ಹಾಜರಿದ್ದರು.

Leave a Reply

Your email address will not be published. Required fields are marked *