ರಾಯಚೂರು ಫೆಬ್ರವರಿ 01 (ಕರ್ನಾಟಕ ವಾರ್ತೆ): ಸಮ ಸಮಾಜ ನಿರ್ಮಾಣಕ್ಕೆ ಬಸವಣ್ಣನವರು ತೋರಿದ ಹಾದಿಯಲ್ಲಿ ಮಡಿವಾಳ ಮಾಚಿದೇವರು ನಡೆದು, ಎಲ್ಲ ಶರಣರ ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡಿದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ನಡೆಯಬೇಕೆಂದು ಸೀತಾ ಸುಬ್ಬರಾಜು ಸ್ಮಾರಕ ಮಹಾವಿದ್ಯಾಲಯದ ವಿಶಾಂತ್ರ ಪ್ರಾಚಾರ್ಯರಾದ ಪರಮೇಶ್ವರ ಸಾಲಿಮಠ ಅವರು ಹೇಳಿದರು.
ಫೆ.01ರ ಭಾನುವಾರ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗನಗಮಂಡಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಯಚೂರು ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ಮಡಿವಾಳ ಮಾಡಿದೇವ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಸಾಮಾಜಿಕ ವ್ಯವಸ್ಥೆಯ ಕೆಳ ಸ್ಥರದಲ್ಲಿದ್ದ ಜಾತಿಗಳಿಗೆ ವಿದ್ಯೆ ಕಲಿಯಲು ಅವಕಾಶ ಇಲ್ಲದ ದಿನಗಳಲ್ಲಿ ಸಾಕಷ್ಟು ವಿಷಯಗಳನ್ನು ಅಧ್ಯಯನ ಮಾಡಿ ಪಾಂಡಿತ್ಯ ಗಳಿಸಿದ್ದವರು ವೀರ ಗಣಾಚಾರಿ ಮಡಿವಾಳ ಮಾಚಿದೇವರು. ಬಸವಣ್ಣನವರು ಮಾಚಿದೇವರನ್ನು ತಂದೆ ಎಂದು ಕರೆದಿದ್ದರು. ಇದು ಮಾಚಿದೇವರ ಮೇಲಿರುವ ಬಸವಣ್ಣನವರ ಗೌರವದ ಪ್ರತೀಕ ಎಂದು ಹೇಳಿದರು.
ಮಡಿವಾಳ ಕುಲದಲ್ಲಿ ಹುಟ್ಟಿದ್ದರೂ ಮಾಚಯ್ಯ ಉತ್ತಮ ಶಿಕ್ಷಣ ಮತ್ತು ಶರಣರ ಸಂಪರ್ಕದಿಂದ ಮಹಾಪುರುಷರಾದರು. ಕಲ್ಯಾಣ ಕ್ರಾಂತಿಯ ಇತಿಹಾಸದಲ್ಲಿ ಮಾಚಯ್ಯ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ಜ್ಞಾನಜ್ಯೋತಿಯಿಂದ ಲೋಕವನ್ನು ಬೆಳಗಿಸಿದ ಮಾಚಯ್ಯ ನುಡಿದಂತೆ ನಡೆದ, ನಡೆದಂತೆ ನುಡಿದ ಶರಣರಲ್ಲಿ ಒಬ್ಬರು. ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಅಧಿಕಾರವಿದೆ ಎಂದು ತಿಳಿಸಿ ಸರ್ವರಿಗೂ ಆಧ್ಯಾತ್ಮಿಕ ಉನ್ನತಿ ಪಡೆಯುವಂತೆ ಪ್ರೋತ್ಸಾಹಿಸಿದರು.
ಈ ವೇಳೆ ಸಮಾಜದ ಜಿಲ್ಲಾಧ್ಯಕ್ಷರಾದ ಜಂಬಣ್ಣ ಅವರು ಮಾತನಾಡಿ, ಜಾತಿ ಪದ್ಧತಿ ಹೋಗಲಾಡಿಸಲು ಅನೇಕ ಶರಣರು ಶ್ರಮಿಸಿದ್ದು, ಅವರಲ್ಲಿ ಮಡಿವಾಳ ಮಾಚಿದೇವ ಪ್ರಮುಖರಾಗಿದ್ದಾರೆ. ಅವರ ಆಚಾರ ವಿಚಾರವನ್ನು ಸಮಾಜದವರು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಎಲ್ಲರಿಗೂ ಅವಕಾಶಗಳನ್ನು ನೀಡಲಾಗಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಸಮಾಜದ ಮಕ್ಕಳಿಗೆ ಹೆಚ್ಚಿನ ಮಟ್ಟದಲ್ಲಿ ಶಿಕ್ಷಣ ನೀಡಲು ಪೋಷಕರು ಆದ್ಯತೆ ನೀಡಬೇಕು. ಉನ್ನತ ಹುದ್ದೆಯಲ್ಲಿ ಸಮಾಜದವರು ಕಾರ್ಯನಿರ್ವಹಿಸುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಮಡಿವಾಳ ಮಾಚಿದೇವ ಭಾವಚಿತ್ರ ಮೆರವಣಿಗೆ: ಕಾರ್ಯಕ್ರಮಕ್ಕೂ ಮೊದಲು ನಗರದ ಆರ್.ಟಿ.ಓ ಸರ್ಕಲ್ ಹತ್ತಿರುವರ ಮಡಿವಾಳ ಮಾಚಿದೇವ ಅವರ ಪುತ್ಥಳಿಗೆ ಸ್ವಾಮೀಜಿಗಳು ಸೇರಿದಂತೆ ವಿವಿಧ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ವೇಳೆ ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರಶಿವಾಚಾರ್ಯ ಸ್ವಾಮಿ ಅವರ ಸಾನಿಧ್ಯದಲ್ಲಿ ಪೂಜೆ ಸಲ್ಲಿಸಲಾಯಿತು.
ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು ಚಾಲನೆ ನೀಡಿದರು. ಈ ವೇಳೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ, ರಾಯಚೂರು ತಹಶೀಲ್ದಾರ್ ಸುರೇಶ ವರ್ಮ, ಮುಖಂಡರಾದ ರವಿ ಜಲ್ದಾರ್ ಸೇರಿದಂತೆ ಸಮಾಜದ ಮುಖಂಡರು ಶಾಸಕರಿಗೆ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಪರಶುರಾಮ್, ಕಂದಾಯ ಅಧಿಕಾರಿ ನರಸಿಂಹ ರೆಡ್ಡಿ, ಸಮಾಜದ ಮುಖಂಡರಾದ ಪಿ.ಶಿವಮೂರ್ತಿ, ಪಿ.ಮಲ್ಲೇಶ, ಎಂ.ಹುಸೇನ್, ನರಸಪ್ಪ, ವೆಂಕಟೇಶ, ಮುನಿಸ್ವಾನಿ, ಜಿ.ವೆಂಕಟೇಶ, ಜಮಾನ, ಈರಮ್ಮ, ದಂಡಪ್ಪ ಬಿರಾದಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *