ಮಾನ್ವಿ : ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಮಡಿವಾಳ ಸಮಾಜದ ಸಂಯುಕ್ತಾಶ್ರಯದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ವಿನಾಯಕರಾವ್ ಅವರು ಶ್ರೀ ಮಡಿವಾಳ ಮಾಚಿದೇವರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರಲ್ಲಿ ಮಡಿವಾಳ ಮಾಚಿದೇವರು ಪ್ರಮುಖ ಶರಣರಾಗಿದ್ದು, ಅನುಭವ ಮಂಟಪದಲ್ಲಿ ಶರಣರು ರಚಿಸಿದ ಅಮೂಲ್ಯ ವಚನಗಳ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ತಾ. ಮಡಿವಾಳ ಸಮಾಜದ ಗೌರವಾಧ್ಯಕ್ಷ ಎಂ. ನಾಗರಾಜ ಅವರು ಮಾತನಾಡಿ, 12ನೇ ಶತಮಾನದಲ್ಲಿ ತಮ್ಮ ಕಾಯಕದ ಶ್ರೇಷ್ಠತೆಯಿಂದ ಮಡಿವಾಳ ಮಾಚಿದೇವರು ಖ್ಯಾತಿ ಪಡೆದರು. ಅವರ ತತ್ವ–ಆದರ್ಶಗಳನ್ನು ಸಮಾಜದವರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಡಿವಾಳ ಸಮಾಜವು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಹಿಂದುಳಿದಿರುವುದಕ್ಕೆ ಸಂಘಟನೆಯ ಕೊರತೆಯೇ ಪ್ರಮುಖ ಕಾರಣವಾಗಿದೆ. ತಾಲೂಕಿನಲ್ಲಿ ಮಡಿವಾಳ ಮಾಚಿದೇವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಸಮುದಾಯ ಭವನ ನಿರ್ಮಾಣ ಅಗತ್ಯವಿದ್ದು, ಸಮಾಜದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಅಶೋಕ ಮಡಿವಾಳ, ಕಾರ್ಯದರ್ಶಿ ಹುಲಿಗೆಪ್ಪ ಅರೋಲಿ, ಮಾಜಿ ಅಧ್ಯಕ್ಷ ಯಲ್ಲಪ್ಪ, ಕಾರ್ಯಾಧ್ಯಕ್ಷ ಬಸವರಾಜ ಬ್ಯಾಗವಾಟ, ಖಜಾಂಚಿ ರಮೇಶ, ಸದಸ್ಯರಾದ ನಗೇಶ ಕಬೇರ, ನರಸರೆಡ್ಡಿ, ನಿಂಗಪ್ಪ, ಹನುಮೇಶ, ಚಂದ್ರನಾಯಕ, ಬಾಬುಲ್, ಉರುಕುಂದಪ್ಪ, ಈರಣ್ಣ, ನಾಗರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

