ಮಾನ್ವಿ : ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಘಟಕದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತೆ ಮಾಸದ ಅಂಗವಾಗಿ ಕಾನೂನು ಅರಿವು ಹಾಗೂ ನೆರವು ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಆನಂದ ಹೆಚ್ ಕೊಣ್ಣೂರು ಉದ್ಘಾಟಿಸಿ ಮಾತನಾಡಿ, ಸಂಚಾರ ನಿಯಮಗಳು ಸುಗಮ ಸಂಚಾರ ಮತ್ತು ಅಮೂಲ್ಯ ಜೀವ ರಕ್ಷಣೆಗಾಗಿ ರೂಪಿಸಲ್ಪಟ್ಟಿವೆ ಎಂದು ತಿಳಿಸಿದರು. ರಸ್ತೆ ನಿಯಮಗಳನ್ನು ಪಾಲಿಸುವುದರಿಂದ ಸುರಕ್ಷಿತ ಪ್ರಯಾಣ ಸಾಧ್ಯವಾಗುತ್ತದೆ. ಅತಿವೇಗದಲ್ಲಿ ವಾಹನ ಚಾಲನೆ ಮಾಡಬಾರದು, ವಾಹನಗಳಿಗೆ ವಿಮೆ ಮಾಡಿಸಿರಬೇಕು. ದ್ವಿಚಕ್ರ ವಾಹನದಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದರಿಂದ ಅಪಘಾತದಲ್ಲಿ ತೀವ್ರ ಗಾಯಗಳು ಹಾಗೂ ಸಾವು ಸಂಭವಿಸಿದ ಅನೇಕ ಘಟನೆಗಳು ಕಂಡುಬರುತ್ತಿವೆ. ನಮ್ಮನ್ನು ನಂಬಿರುವ ಕುಟುಂಬದವರಿಗಾಗಿ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಘಟಕದ ವ್ಯವಸ್ಥಾಪಕರಾದ ನಾಗರಾಜ ಮಾತನಾಡಿ, ಚಾಲಕರು ಅಪಘಾತಗಳನ್ನು ತಪ್ಪಿಸಲು ನಿಯಮಿತ ಹಾಗೂ ಜವಾಬ್ದಾರಿಯುತ ಚಾಲನೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಓವರ್‌ಟೇಕ್, ಅತಿವೇಗದ ಚಾಲನೆ ಅಪಾಯಕಾರಿ ಎಂದು ಎಚ್ಚರಿಸಿದರು. ಚಾಲಕರು ಸಮಯಕ್ಕಿಂತ ಮೊದಲು ಘಟಕಕ್ಕೆ ಆಗಮಿಸಿ ವಾಹನದ ಸ್ಥಿತಿಯನ್ನು ಪರಿಶೀಲಿಸಬೇಕು. ತಮ್ಮ ಬಸ್ಸಿನಲ್ಲಿ ಶಾಲಾ ಮಕ್ಕಳು, ವೃದ್ದರು, ಮಹಿಳೆಯರು ಸೇರಿದಂತೆ ಅನೇಕರು ಸಂಚಾರಿಸುವುದರಿಂದ ಅವರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾನ್ವಿ ಪೊಲೀಸ್ ಠಾಣೆಯ ಎ.ಎಸ್.ಐ. ಹನುಮೇಶ, ಸಹಾಯಕ ಸರ್ಕಾರಿ ಅಭಿಯೋಜಕರಾದ ಅರ್ಚನಾ ಯಾದವ್, ವಕೀಲರ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ಪ್ರ.ಕಾರ್ಯದರ್ಶಿ ಯಲ್ಲಪ್ಪ ಬಾದರದಿನ್ನಿ, ದತ್ತಾತ್ರೇಯ ಹಿರೆಕೋಟ್ನೆಕಲ್, ಚನ್ನಬಸವ ನಾಯಕ ಸೇರಿದಂತೆ ಸಾರಿಗೆ ಘಟಕದ ಚಾಲಕರು, ನಿರ್ವಹಕರು ಹಾಗೂ ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

