ಮುದ್ದೇಬಿಹಾಳ: ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳ ಕೇಂದ್ರ ಸಂಘ ಬೆಂಗಳೂರು (ರಿ) ತಾಲೂಕು ಘಟಕ ಮುದ್ದೇಬಿಹಾಳ ವತಿಯಿಂದ ನೂತನ ವರ್ಷದ ಕ್ಯಾಲೆಂಡರ್ ಉದ್ಘಾಟನಾ ಸಮಾರಂಭವನ್ನು ನಗರದ ತಾಲೂಕು ಆಸ್ಪತ್ರೆಯಲ್ಲಿ ವಿಜೃಂಭಣೆಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪರಶುರಾಮ ವಡ್ಡರ ವಹಿಸಿ ಮಾತನಾಡಿ, ಇಲ್ಲಿನ ಸಿಬ್ಬಂದಿಯ ಸೇವಾ ಮನೋಭಾವ ಮತ್ತು ಶಿಸ್ತುಪೂರ್ಣ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಸಿಬ್ಬಂದಿಯ ಕಾರ್ಯವನ್ನು ಮರೆಯಲು ಸಾಧ್ಯವಿಲ್ಲ. ಎಲ್ಲರೂ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೆಮ್ಮೆಯಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನಿಕಟ ಪೂರ್ವ ಆಡಳಿತ ವೈದ್ಯಾಧಿಕಾರಿ ಡಾ. ಅನಿಲ್‌ಕುಮಾರ ಸೇಗುಣಿಸಿ ಮಾತನಾಡಿ, ಇಂತಹ ಒಗ್ಗಟ್ಟು ಕರ್ನಾಟಕ ರಾಜ್ಯದಲ್ಲೇ ಅಪರೂಪ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಿಬ್ಬಂದಿಯು ಅತ್ಯುತ್ತಮ ಸೇವೆ ಸಲ್ಲಿಸಿರುವುದು ಶ್ಲಾಘನೀಯ. ಮುದ್ದೇಬಿಹಾಳ ಸಂಘದ ಮಾದರಿಯನ್ನು ಅನುಸರಿಸಿ ಎಚ್.ಡಿ. ಕೋಟೆಯಲ್ಲಿಯೂ ಈ ವರ್ಷ ಕ್ಯಾಲೆಂಡರ್ ಬಿಡುಗಡೆ ಮಾಡಿರುವುದು ಸಂತಸದ ಸಂಗತಿ ಎಂದರು.
ಸ್ತ್ರೀರೋಗ ತಜ್ಞೆ ಡಾ. ಅನುಪಮಾ ಶೆಟ್ಟಿ ಹಾಗೂ ಹಿರಿಯ ಶುಶ್ರೂಷಾಧಿಕಾರಿ ಸಂಜೆ ಬೋಸ್ಲೆ ಮಾತನಾಡಿ, ವರ್ಷದಲ್ಲಿ 365 ದಿನಗಳೂ ನರ್ಸಿಂಗ್ ಸಿಬ್ಬಂದಿ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ಎಂಬ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಕಳೆದ ಆರು ವರ್ಷಗಳಿಂದ ನಿರಂತರವಾಗಿ ಕ್ಯಾಲೆಂಡರ್ ಮುದ್ರಿಸಲಾಗುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ಶ್ರೀ ಆನಂದಗೌಡ ಬಿರಾದಾರ ಮಾತನಾಡಿ, ನರ್ಸಿಂಗ್ ಅಧಿಕಾರಿಗಳ ಸೇವೆ ಆರೋಗ್ಯ ಇಲಾಖೆಯ ಕಂಬದಂತಿದೆ. ದಿನದ 24 ಗಂಟೆಗಳೂ ಸೇವೆ ಸಲ್ಲಿಸುವ ಸಿಬ್ಬಂದಿಯ ಕಾರ್ಯ ಶ್ಲಾಘನೀಯ. ಸರ್ಕಾರಿ ನೌಕರರು ತಮ್ಮ ಆರೋಗ್ಯದ ಮೇಲೂ ಗಮನಹರಿಸಬೇಕಾದ ಅಗತ್ಯವಿದ್ದು, ಸಂಘದ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸುವಂತೆ ಸಲಹೆ ನೀಡಿದರು.
ಶ್ರೀಮತಿ ಅಯ್ಯಮ್ಮ ಕೊಣ್ಣೂರ, ಶ್ರೀಮತಿ ಶಾಂತ ಮೇಟಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ನಿರ್ದೇಶಕ ಶ್ರೀ ವಿಟ್ಟಲ ಕಿಲಾರಟ್ಟಿ ಮಾತನಾಡಿ, ಇಂತಹ ಕಾರ್ಯಕ್ರಮಗಳು ಒಗ್ಗಟ್ಟಿನಿಂದ ಮಾತ್ರ ಸಾಧ್ಯ. ಸಂಘದ ಏಕತೆಯೇ ಈ ಸಾಧನೆಗೆ ಕಾರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಿಂದಿನ ಹಾಗೂ ಪ್ರಸ್ತುತ ಆಡಳಿತ ವೈದ್ಯಾಧಿಕಾರಿಗಳನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಯನ ಭಾರ್ಗವ ಪತ್ರಿಕೆಯ ಪುರಸ್ಕೃತರಿಗೆ ಗೌರವ ಪ್ರದಾನ ಮಾಡಲಾಯಿತು.
ಸಂಘದ ಅಧ್ಯಕ್ಷ ಶ್ರೀ ಶಿವಣ್ಣ ಎಸ್. ಮಾಗಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಸಲಹೆಗಾರ ಶ್ರೀ ಕಾಶಿನಾಥ ವಗದುರ್ಗಿ ವಂದನಾರ್ಪಣೆ ಸಲ್ಲಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ಮಹಮ್ಮದರಫೀಕ್ ಬಾಗವಾನ ಸ್ವಾಗತಿಸಿದರು. ಕಾರ್ಯಧ್ಯಕ್ಷ ಶ್ರೀ ಸಂತೋಷ ಅಂಗಡಿಗೇರಿ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ಪ್ರಾಸ್ತಾವಿಕ ನುಡಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಚಿನ್ ರಾಥೋಡ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ಸಂಘವು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾದರಿಯಾಗಿದ್ದು, ನಿರಂತರ ಆರು ವರ್ಷಗಳಿಂದ ಈ ಕಾರ್ಯ ಕೈಗೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು. ಬಿಜಾಪುರ ಹಾಗೂ ಬಾಗಲಕೋಟ್ ಆರೋಗ್ಯ ಸಂಘಗಳ ಗಣರಾಜ್ಯೋತ್ಸವ ಧ್ವಜಾರೋಹಣವನ್ನು ನರ್ಸಿಂಗ್ ಅಧಿಕಾರಿ ಸಂತೋಷ ಅಂಗಡಿಗೇರಿ ನೆರವೇರಿಸಿರುವುದು ಗೌರವದ ಸಂಗತಿ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಯಲಗುರೇಶ ತೊನಶಾಳ ಮಾತನಾಡಿ, ಇಂತಹ ಕಾರ್ಯಕ್ರಮಗಳು ಇನ್ನಷ್ಟು ಸಂಖ್ಯೆಯಲ್ಲಿ ಆಯೋಜನೆಯಾಗಬೇಕು ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ಬಸವರಾಜ ಹಾವೇರಿ, ವಿಜಯ ಮಾಂತೇಶ, ದಾವುದ ಮಕಾಂದಾರ, ಪಾವಡಶೆಟ್ಟಿ, ಬಸವರಾಜ ಬಡಿಗೇರ, ಎಂ.ಎಸ್. ಗೌಡರ, ಮಲ್ಲು ತಂಗಡಗಿ (ಎಫ್‌ಡಿಸಿ), ಶ್ರೀಕಾಂತ ಸಜ್ಜನ, ಶ್ರೀಮತಿ ಕಲ್ಯಾಣಿ ಕೊಣ್ಣೂರ, ಓಲೆಕಾರ್, ರಾಜಶ್ರೀ ಹೊಕ್ರಾಣಿ, ರೇಖಾ ಜಾಯಗೊಂಡ, ನಸ್ರೀನ ಕೆ., ಶಿಲ್ಪಾ, ಭಾರತಿ, ರೇಷ್ಮಾ, ಸಲೀಂ ನದಾಫ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿ ಉಪಸ್ಥಿತರಿದ್ದರು.

